ಕುಂದಾಪುರ: ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ: ಓರ್ವನ ಬಂಧನ

Spread the love

ಕುಂದಾಪುರ: ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಾಡ್ನಿಂದ ಹಲ್ಲೆ ಪ್ರಕರಣ: ಓರ್ವನ ಬಂಧನ

ಕುಂದಾಪುರ: ಇತ್ತೀಚೆಗೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ರಸ್ತೆಯ ಮಧ್ಯದಲ್ಲಿ ವಿದ್ಯಾರ್ಥಿಗಳಿಗೆ ರಾಡ್ ನಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕುಂದಾಪುರ ಪೊಲೀಸರು ಒರ್ವನ್ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಸಮೀಪದ ನಿವಾಸಿ ಸುಬ್ರಮಣ್ಯ ಶೆಟ್ಟಿ (19) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಯುವಕರ ತಂಡವೊಂದು ಹಳೆಯ ದ್ವೇಶದ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು. ನಡುರಸ್ತೆಯಲ್ಲಿ ನೆರೆದಿದ್ದ ಸಾರ್ವಜನಿಕರ ಎದುರು ಮನಸ್ಸೋಇಚ್ಚೆ ರಾಡು, ಹೆಲ್ಮೆಟ್ ಮೊದಲಾದವುಗಳಿಂದ ವಿದಾರ್ಥಿಗಳಿಗೆ ಥಳಿಸಲಾಗಿದ್ದು ಓರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕವಾದ ಚರ್ಚೆಗೆ ಗ್ರಾಸವಾಗಿತ್ತು.

ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಕುಂದಾಪುರ ಠಾಣೆ ಪಿಎಸ್ಐ ಹರೀಶ್ ಆರ್. ನಾಯ್ಕ್ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆಯೇ ಗುರುವಾರ ಸಂಜೆ ಇದೇ ಪ್ರಕರಣದ ಸಲುವಾಗಿ ವಿಶೇಷ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಾದ ಚೇತನ್ ಹಾಗೂ ಪ್ರಸನ್ನ ಕೋಟೆಶ್ವರ ಹಾಲಾಡಿ ಜಂಕ್ಷನ್ ಬಳಿ ಆರೋಪಿ ಸುಬ್ರಮಣ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ.

ಆರೋಪಿಯು ವಿಚಾರಣೆ ವೇಳೆ ಅಂದಿನ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದು ಮಾತ್ರವಲ್ಲದೇ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Spread the love