ಕುಂದಾಪುರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಕೂತ ಬೈಂದೂರು ಶಾಸಕ ಗಂಟಿಹೊಳೆ!
ಕುಂದಾಪುರ: ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ಅನ್ಯಕೋಮಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಕುಂದಾಪುರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಎಪ್ರಿಲ್ 8 ರಂದು ಸಂಜೆ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಅನ್ಯಕೋಮಿನ ಯುವಕನಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಸ್ಥಳೀಯ ಮಹೇಶ್ ಎಂಬಾತನ ವಿರುದ್ದ ವಿದ್ಯಾರ್ಥಿನಿಯ ತಾಯಿಯಿಂದ ಕುಂದಾಪುರ ಠಾಣೆಗೆ ದೂರು ನೀಡಿದ್ದು ಬೆದರಿಕೆ, ಹಲ್ಲೆ ,ಅವಾಚ್ಯ ಶಬ್ದದ ನಿಂದನೆ ಪ್ರಕರಣವನ್ನು ಕುಂದಾಪುರ ಪೊಲೀಸರು ದಾಖಲಿಸಿದ್ದು, ಆರೋಪಿ ಮಹೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಹೇಶ್ ಬಂಧನ ಖಂಡಿಸಿ ಠಾಣೆಯ ಮುಂದೆ ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನೆ ನಡೆಸಿದ್ದು ಈ ವೇಳೆ ಮಾತನಾಡಿ ನಿರಂತರವಾಗಿ ಹಿಂದುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ. ಪ್ರಶ್ನೆ ಮಾಡಿದವರ ಮೇಲೆ ಪೊಲೀಸರು ಕೇಸು ದಾಖಲಿಸುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ವರ್ತನೆಯನ್ನು ನೋಡಿ ಮಹೇಶ್ ಪ್ರಶ್ನೆ ಮಾಡಿ ಎಚ್ಚರಿಕೆ ನೀಡಿದ್ದರು. ವಿದ್ಯಾರ್ಥಿನಿಯನ್ನು ಚುಡಾಯಿಸಿದ ಅನ್ಯಕೋಮಿನ ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದಾರೆ.
ಹಿಂದೂ ವಿದ್ಯಾರ್ಥಿ ನಿಯ ತಾಯಿಯ ಮೂಲಕ ಒತ್ತಾಯದಿಂದ ಪ್ರಕರಣ ದಾಖಲಿಸಿದ್ದು ಈ ಘಟನೆಯನ್ನು ಖಂಡಿಸಿ ನಾನು ಪ್ರತಿಭಟನೆ ಕೂತಿದ್ದೇನೆ. ಚುಡಾಯಿಸಿದ ಮುಸಲ್ಮಾನ ಹುಡುಗರನ್ನು ರಕ್ಷಣೆ ಮಾಡುತ್ತಿರೋದು ಯಾಕೆ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪುಂಡಪೋಕರಿಗಳ ಚಟುವಟಿಕೆ ಜಾಸ್ತಿಯಾಗಿದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಕೈಬಿಡುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಅವರನ್ನು ಕುಂದಾಪುರ ಡಿವೈಎಸ್ಪಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದರು ಆದರೆ ಅದು ಸಫಲವಾಗಿಲ್ಲ