ಕುಂದಾಪುರ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗುವತ್ತ! ಶೋಭಾ ಹೇಳಿಕೆಯಿಂದ ಗೊಂದಲ ; ಕಿಶೋರ್ ಕುಮಾರ್
ಕುಂದಾಪುರ: ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಮುಂದಿನ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬುದಾಗಿ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಏಕಾಏಕಿ ಪ್ರಕಟಿಸಿರುವುದು ಕುಂದಾಪುರದಲ್ಲಿ ಬಿಜೆಪಿ ಪಕ್ಷ ಮನೆಯೊಂದು ಮೂರು ಬಾಗಿಲು ಎಂಬಂತಹ ಗೊಂದಲದ ಪರಿಸ್ಥಿತಿ ಕಾರ್ಯಕರ್ತರಲ್ಲಿ ಉಂಟಾಗಲು ಕಾರಣವಾಗಿದೆ.
ಮಂಗಳವಾರ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಪಕ್ಷದ ವತಿಯಿಂದ ಉಡುಪಿಯಲ್ಲಿ ಆಯೋಜಿಸಿದ ಬೂತ್ ಮಟ್ಟದ ಸಭೆಗಳಲ್ಲಿ ಭಾಗವಹಿಸುವ ಕಾರ್ಯಕ್ರಮಗಳಿದ್ದರೂ ಕುಂದಾಪುರದ ಯಾರೋಬ್ಬ ಬಿಜೆಪಿ ನಾಯಕರ ಗಮನಕ್ಕೂ ತಾರದೇ ಬೈಂದೂರು ಲೋಕಸಭಾ ವ್ಯಾಪ್ತಿಯ ಹೇರಿಕುದ್ರು ರಸ್ತೆ ಕಾಮಗಾರಿ ವೀಕ್ಷಣೆಯ ಕುರಿತು ಬಂದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಮುಂದಿನ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬುದಾಗಿ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಏಕಾಏಕಿ ಪ್ರಕಟಿಸಿದ್ದರು. ಇದರಿಂದ ಕುಂದಾಪುರದಲ್ಲಿ ಈಗಾಗಲೇ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ನಾಯಕರಿಗೆ ಒಂದು ರೀತಿಯ ಕಸಿವಿಸಿಯನ್ನು ಉಂಟು ಮಾಡಿದ್ದರು. ಅಲ್ಲದೆ ಕುಂದಾಪುರಕ್ಕೆ ಸಂಸದೆ ಭೇಟಿ ನೀಡುವ ಸಂದರ್ಭ ಸ್ಥಳೀಯ ಬಿಜೆಪಿ ನಾಯಕರಿಗೆ ಕೂಡ ಮಾಹಿತಿ ನೀಡಿದಿರುವುದು ಬೇಸರ ತರಿಸಿತ್ತು.
ಸಂಸದೆಯ ಹೇಳಿಕೆಗೆ ಬುಧವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಹಿಂದಿನ ಕುಂದಾಪುರ ಕ್ಷೇತ್ರದ ಅಭ್ಯರ್ಥಿ ಕಿಶೋರ್ ಕುಮಾರ್ ಪ್ರತಿಕ್ರಿಯೆ ನೀಡಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಇದುವರೆಗೂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿಲ್ಲ. ಕುಂದಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಇದುವರೆಗೆ ಘೋಷಣೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಹಲವಾರು ಕಮಿಟಿಗಳಿವೆ. 40 ರಿಂದ 45 ಕ್ಷೇತ್ರಗಳಲ್ಲಿ ಸಂಘಪರಿವಾರ ಕೆಲಸ ಮಾಡುತ್ತಿದೆ. ಇವರೆಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದರು.
ಕೆಲ ದಿನಗಳ ಹಿಂದಷ್ಟೆ ಕ್ಷೇತ್ರದ ಪಕ್ಷೇತರ ಶಾಸಕರು ರಾಜ್ಯ ಮಟ್ಟದ ಟಿವಿ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಚನಾವಣೆಯವರೆಗೂ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಅವರೇ ಅಭ್ಯರ್ಥಿ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ ಎಂದು ಕಿಶೋರ್ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿಬೇಕು ಎನ್ನುವ ಕುರಿತು ಅಂತಿಮ ಪ್ರಕ್ರಿಯೆ ಪಕ್ಷ ಇದುವರೆಗೂ ಹೊರಡಿಸಿಲ್ಲ. ಹೀಗಿರುವಾಗ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕುಂದಾಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಕಿಶೋರ್ ಕುಮಾರ್ ನುಡಿದರು.
ಕುಂದಾಪುರದ ಮುಂದಿನ ವಿಧಾನ ಸಭಾ ಅಭ್ಯರ್ಥಿ ನೀವು ಆಗಬಯಸಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಶೋರ್ ಕುಮಾರ್, ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ನಾನು ಅಭ್ಯರ್ಥಿಯಾಗಿದ್ದೇನೆ. ಈ ವರ್ಷವೂ ನಾನು ಯಾಕೆ ಕೇಳಬಾರದು ಎಂದು ಪ್ರಶ್ನಿಸಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿಯೂ ಇರುವಂತೆ ಒಂದಿಷ್ಟು ಗೊಂದಲಗಳು ನಮ್ಮ ಕ್ಷೇತ್ರದಲ್ಲಿಯೂ ಇವೆ. ಗೊಂದಲಗಳು ಸರಿಪಡಿಸುವ ಕೆಲಸಗಳು ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಭಟ್ಕಳದಿಂದ ಪ್ರಯಾಣ ಬೆಳೆಸಿದ್ದಾರೆ. ಅವರು ಬೈಂದೂರು, ಉಡುಪಿ, ಕಾಪು, ಕಾರ್ಕಳ ಅಭ್ಯರ್ಥಿಯ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದರೆ ಕುಂದಾಪುರ ಅಭ್ಯರ್ಥಿಯ ಕುರಿತು ಹೇಳಿಕೆ ನೀಡಿರುವುದು ಕೆಲವು ಗೊಂದಲಗಳಿಗೆ ಕಾರಣವಾಗಿದೆ ಎಂದರು.
ಜಯಪ್ರಕಾಶ ಹೆಗ್ಡೆಯವರು ಪಕ್ಷದ ಹೊರಗಿದ್ದು, ಸ್ಥಳೀಯ ಚುನಾವಣೆಗಳಲ್ಲಿ ನಮ್ಮನ್ನು ಬೆಂಬಲಿಸಿದ್ದರು. ಬಳಿಕ ಬಹಿರಂಗವಾಗಿ ಪಕ್ಷಕ್ಕೆ ಸೇರ್ಪಡೆಗೊಂಡು, ಪಕ್ಷವನ್ನು ಬೆಳೆಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆದರೆ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಎಲ್ಲೆಲ್ಲೊ ಬಿಜೆಪಿ ನಡೆಸುವ ಸಭೆಗಳಲ್ಲಿ ಕಾಣಿಸಿಕೊಂಡು ಮತ್ತೆ ಕಣ್ಮರೆಯಾಗುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ ಕಾವೇರಿ, ಶಂಕರ ಅಂಕದಟ್ಟೆ, ಗಣೇಶ ಭಟ್, ಉದಯ ಮೆಂಡನ್, ಮಹೇಶ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.