Home Mangalorean News Kannada News ಕುಂದಾಪುರ, ಬೈಂದೂರಿನಲ್ಲಿ ಬಿರುಸಿನ ಮಳೆ: ತಗ್ಗುಪ್ರದೇಶದಲ್ಲಿನ ಮನೆ, ತೋಟ, ಕೃಷಿಗದ್ದೆಗಳು ಜಲಾವೃತ

ಕುಂದಾಪುರ, ಬೈಂದೂರಿನಲ್ಲಿ ಬಿರುಸಿನ ಮಳೆ: ತಗ್ಗುಪ್ರದೇಶದಲ್ಲಿನ ಮನೆ, ತೋಟ, ಕೃಷಿಗದ್ದೆಗಳು ಜಲಾವೃತ

Spread the love

ಕುಂದಾಪುರ, ಬೈಂದೂರಿನಲ್ಲಿ ಬಿರುಸಿನ ಮಳೆ: ತಗ್ಗುಪ್ರದೇಶದಲ್ಲಿನ ಮನೆ, ತೋಟ, ಕೃಷಿಗದ್ದೆಗಳು ಜಲಾವೃತ

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಮಂಗಳವಾರದಿಂದ ಬಿರುಸಿನ ಮಳೆಯಾಗಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡು ಕೆಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ.

ಎರಡು ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬೆಳ್ವೆ, ಗಂಗೊಳ್ಳಿ, ತ್ರಾಸಿ, ಮರವಂತೆ, ನಾವುಂದ, ಹಕ್ಲಾಡಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಗದ್ದೆಗಳಲ್ಲಿ ನೀರು ತುಂಬಿಕೊಂಡಿದ್ದು, ತಗ್ಗು ಪ್ರದೇಶಗಳಲ್ಲಿರುವ ರಸ್ತೆ, ತೋಟ ಹಾಗೂ ಮನೆಗಳಿಗೂ ನೀರು ನುಗ್ಗಿದೆ.

ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು, ನಾವುಂದ, ಬಡಾಕೆರೆ, ಪಡುಕೋಣೆ, ಅರೆಹೊಳೆ, ಸೇನಾಪುರ, ಕೆಲಬದಿ, ಮತ್ತಿತರ ಕಡೆಗಳಲ್ಲಿ ಹಲವು ಮನೆಗಳ ಆಸುಪಾಸಿನಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ನಾವುಂದ, ಚಿಕ್ಕಳ್ಳಿ, ಕಡಿಕೆ, ನಾಡ ಮತ್ತಿತರ ಕಡೆಗಳ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ಪರಿಸರದಲ್ಲಿ 40-50 ಮಂದಿ ಕೃಷಿಕರ ಎಕರೆಗಟ್ಟಲೆ ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಹೆಚ್ಚಿನ ಗದ್ದೆಗಳಲ್ಲಿ ಈಗಷ್ಟೇ ನಾಟಿ ಕಾರ್ಯ ಮುಗಿದಿತ್ತು.

ಕುಂದಾಪುರ, ಬೈಂದೂರು ಭಾಗದ ವಾರಾಹಿ, ಸೌಪರ್ಣಿಕಾ, ಕುಬ್ಜಾ, ಚಕ್ರ, ಸುಮನಾವತಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ತ್ರಾಸಿ ಭಾಗದ ಕಡಲ ತೀರದಲ್ಲಿ ಕಡಲಬ್ಬರ ಜೋರಾಗಿದ್ದು, ಕಂಚುಗೋಡು, ಮರವಂತೆ ಮತ್ತಿತರ ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದ್ದು, ತೀರದ ಹತ್ತಾರು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.


Spread the love

Exit mobile version