ಕುಂದಾಪುರ: ನವೋದಯ ಸಂಘದ ಮಹಿಳೆಯರಿಗೆ ವಿತರಿಸಲು ಎಂದು ಹೇಳಲಾದ ಬ್ಯಾಂಕೊಂದರ ಗೋದಾಮಿನಲ್ಲಿರಿಸಿದ 42 ಮೂಟೆಗಳಲ್ಲಿದ್ದ 7500 ಸೀರೆಗಳನ್ನು ಚುನಾವಣೆಯ ಅಧಿಕಾರಿಗಳು ಮಂಗಳವಾರ ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಪ್ರಮುಖ ಬ್ಯಾಂಕೊಂದರ ಮಹಿಳಾ ನವೋದಯ ಸಂಘಟನೆಯ ಸದಸ್ಯರಿಗೆ ಸಮವಸ್ತ್ರಗಳನ್ನು ಬೈಂದೂರಿನ ಬ್ಯಾಂಕೊಂದರಲ್ಲಿ ಶೇಖರಿಸಿಡಲಾಗಿದ್ದು, ಈ ಬಗ್ಗೆ ಫೆ.12ರಂದು ಕೆಲವು ವ್ಯಕ್ತಿಗಳು ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದ್ದರು.ಬಳಿಕ ಸೋಮವಾರ ಸಂಜೆ ಬಿಜೆಪಿ ನಾಯಕರು ಈ ಗೋದಾಮಿಗೆ ಮುತ್ತಿಗೆ ಹಾಕಿ ಈ ಸೀರೆಗಳು ಚುನಾವಣೆ ಸಂಧರ್ಭ ಹಂಚಲಿಕ್ಕಾಗಿ ಶೇಖರಿಸಿದ್ದಾಗಿದೆ ಹೀಗಾಗಿ ಇವುಗಳನ್ನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ಚುನಾವಣಾ ಸೆಕ್ಟರ್ ಅದಿಕಾರಿಗಳು ತಲಾ 180 ಸೀರೆಗಳಿರುವ 42 ಬಾಕ್ಸ್ಗಳಲ್ಲಿರುವ 7560 ನವೋದಯ ಸಂಘದ ಸೀರೆಗಳನ್ನು ಜಪ್ತಿ ಮಾಡಿದ್ದಾರೆ.ಮತ್ತು ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಂಕಿನ ಅಧಿಕಾರಿಗಳು ಈ ಸೀರೆಗಳು ನವೋದಯ ಸ್ವ-ಸಹಾಯ ಸಂಘಕ್ಕಾಗಿ ಕಳೆದ ನಾಲ್ಕೈದು ತಿಂಗಳ ಹಿಂದೆ ಸರಬರಾಜು ಮಾಡಲಾಗಿತ್ತು.ಶೀಘ್ರದಲ್ಲಿ ಭಟ್ಕಳದಲ್ಲಿ ನವೋದಯ ಶಾಖೆ ಪ್ರಾರಂಭಗೊಳ್ಳಲಿದೆ. ಅದಕ್ಕಾಗಿ ಬಂದೂರು ಶಾಖೆಯಲ್ಲಿ ಸೀರೆಗಳನ್ನು ಶೇಖರಿಸಿಡಲಾಗಿತ್ತು.ಕಛೇರಿಯಲ್ಲಿ ಈ ಬಂಡಲ್ಗಳು ಭದ್ರತಾ ಕೊಠಡಿಯ ಸಿ.ಸಿ ಕೆಮರಾಗಳಿಗೆ ತಡೆ ಉಂಟು ಮಾಡುತ್ತಿರುವುದರಿಂದ ಶಾಖೆಯ ಸಮೀಪವಿರುವ ಖಾಸಗಿ ಕಟ್ಟಡದಲ್ಲಿ ಇರಿಸಲಾಗಿತ್ತು.ಇದು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಶೇಖರಿಸಿದ ಸೀರೆಗಳಲ್ಲ ಎಂದಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ ಸುಕುಮಾರ್ ಶೆಟ್ಟಿ ಅವರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾದಿಸಲಿದೆ ಇದರಿಂದ ಹತಾಶರಾದ ಕಾಂಗ್ರೆಸ್ ಪಕ್ಷದವರು ಹಣ ಮತ್ತು ಸೀರೆ ಹಂಚುವ ಮೂಲಕಮತದಾರರನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ ಬ್ಯೆಂದೂರು ಜಿ.ಪಂ ಅಭ್ಯರ್ಥಿಗಳು ನವೋದಯ ಸೀರೆಗಳನ್ನು ಹಂಚಲಿಕ್ಕಾಗಿ ಶೇಖರಿಸಿದ್ದಾರೆ.ನಮ್ಮ ಕಾರ್ಯಕರ್ತರು ಇದನ್ನು ತಡೆಹಿಡಿದ್ದಾರೆ ಎಂದಿದ್ದಾರೆ.
ಬೈಂದೂರು ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಇದಕ್ಕೆ ಪ್ರತಿಕ್ರಿಯಿಸಿ ಸೀರೆ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಅದು ನವೋದಯ ಹಾಗೂ ಕೇಂದ್ರ ಸಹಕಾರಿ ಬ್ಯಾಂಕಿನ ವಿಚಾರವಾಗಿದೆ.ಆದರೆ ಸೋಲಿನ ಭೀತಿಯಲ್ಲಿರುವ ಬಿಜೆಪಿ ಮುಖಂಡರು ಈಗಾಗಲೇ ಇಂತಹ ಹಲವು ಆರೋಪಗಳನ್ನು ಮಾಡುವುದರ ಮೂಲಕ ಕೀಳುಮಟ್ಟದ ರಾಜಕೀಯ ನಡೆಸುತ್ತಿರುವುದು ಬೇಸರದ ವಿಚಾರವಾಗಿದೆ.ಈ ಬಗ್ಗೆ ನಾನು ಪ್ರತಿಕ್ರಯಿಸುವುದಿಲ್ಲ .ಆದರೆ ನನ್ನ ಮೇಲೆ ಆರೋಪ ಮಾಡುತ್ತಿರುವ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ ಈ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿಯಾಗಿದ್ದವರು. ನಾನು ಸೀರೆಯನ್ನು ಮತದಾರರಿಗೆ ಹಂಚಲು ತಂದಿಲ್ಲ ಹಾಗೂ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೂಕಾಂಬಿಕೆಯ ಎದುರು ಪ್ರಮಾಣ ಮಾಡುತ್ತೇನೆ. ಅದೇ ರೀತಿ ನನ್ನ ಮೇಲೆ ಆಪಾದನೆ ಮಾಡುತ್ತಿರುವ ಸುಕುಮಾರ ಶೆಟ್ಟಿಯವರು ಬಂದು ಪ್ರಮಾಣ ಮಾಡಲಿ ಆಗ ಜನರಿಗೆ ಯಾವುದು ಸತ್ಯ ಎಂದು ತಿಳಿಯುತ್ತದೆ ಎಂದಿದ್ದಾರೆ.