ಕುಂದಾಪುರ: ಬೈಕ್‌ಗಳ ಮುಖಾಮುಖಿ ಡಿಕ್ಕಿ – ಯುವಕ ಸಾವು
ಕುಂದಾಪುರ: ಬೈಕ್‌ಗಳ ಮುಖಾಮುಖಿ ಢಿಕ್ಕಿಯಾಗಿ ಯುವಕನೊರ್ವ ಮೃತಪಟ್ಟ ಧಾರುಣ ಘಟನೆ ನಗರದ ಹೊರವಲಯದ ಹಂಗಳೂರಿನ ನಗು ಪ್ಯಾಲೇಸ್ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದೆ.
ಪುರಸಭೆಯ ಚರ್ಚ್ ರಸ್ತೆ ಸಮೀಪದ ಬರೆಕಟ್ಟು ಬಾಳೆಹಿತ್ಲು ನಿವಾಸಿ ಪೈಂಟರ್ ವೆಂಕಟೇಶ್ ಎಂಬವರ ಪುತ್ರ ಶಶಾಂಕ್ ಮೊಗವೀರ (22) ಅಪಘಾತದಲ್ಲಿ ಮೃತಪಟ್ಟ ಯುವಕ.
ಬೆಂಗಳೂರು ಮೂಲದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ ಮೊಗವೀರ ಶನಿವಾರ ರಾತ್ರಿ ಹಂಗಳೂರಿನ ರಿಲಯನ್ಸ್ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಹಿಂತಿರುಗುವ ಸಮಯದಲ್ಲಿ ಸರ್ವಿಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ರೋಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿಗೆ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಶಾಂಕ್, ಬುಲೆಟ್ ಸವಾರ ಹಾಸನ ಮೂಲದ ಯುವಕ ಪುನೀತ್ ಹಾಗೂ ಬುಲೆಟ್‌ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಅವರ ತಾಯಿ ಪದ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಏಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಶಶಾಂಕ್ ಕೊನೆಯುಸಿರೆಳೆದಿದ್ದಾರೆ. ಶಶಾಂಕ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಹ ಸವಾರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬುಲೆಟ್ ಸವಾರರಾದ ಪುನೀತ್ ಅವರ ಸ್ಥಿತಿ ಗಂಭೀರವಾಗಿದೆ. ಅವರ ತಾಯಿ ಕೂಡ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕಂಡ್ಲೂರಿನಲ್ಲಿ ಬೇಕರಿ ಹೊಂದಿದ್ದ ಪುನೀತ್ ತಾಯಿಯನ್ನು ಬಿಡಲೆಂದು ಕೋಟೇಶ್ವರ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಕುಂದಾಪುರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ನಂಜಪ್ಪ ಅವರ ಮಾರ್ಗದರ್ಶನದಲ್ಲಿ ಎಸ್.ಐ ಪ್ರಸಾದ್ ತನಿಖೆ ನಡೆಸುತ್ತಿದ್ದಾರೆ.