ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ಬಳಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ
ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಗಣೇಶ್ ಹಾಗೂ ಕಬ್ಬಿಣದ ರಾಡುಗಳನ್ನು ಹಿಡಿದ ಬೇರೆ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು , ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಡಹಗಲೇ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಸರ್ಕಾರೀ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಅಂತಿಮ ಬಿಕಾಂ ವಿದ್ಯಾರ್ಥಿ ಮಿಥುನ್ ಹಾಗೂ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಅಕ್ಷಯ ಎಂದು ಗುರುತಿಸಲಾಗಿದ್ದು, ಹೊಡೆದಾಟ ತಪ್ಪಿಸಲು ಹೋದ ಇತರ ಕೆಲವು ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ.
ಗಣೇಶ್ ಹಾಗೂ ಮಿಥುನ್ ಮತ್ತು ಅಕ್ಷಯ ನಡುವೆ ಮೊದಲಿನಿಂದಲೂ ವೈಷಮ್ಯವಿತ್ತು. ಗಣೇಶ್ಗೆ ಈ ಹಿಂದೆ ಅಕ್ಷಯ್ ಮತ್ತು ಮಿಥುನ್ ತಂಡದಿಂದ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದ ಗಣೇಶ್ ತನ್ನ ಸ್ನೇಹಿತರಾದ ನಾಡಾ ಗುಡ್ಡೆಯಂಗಡಿ ಪ್ರದೇಶದ ಕಾಲೇಜೊಂದರ ವಿದ್ಯಾರ್ಥಿಗಳ ಸಹಾಯ ಕೇಳಿದ್ದ.
ಸೋಮವಾರ ಮಧ್ಯಾಹ್ನ ಊಟದ ಸಮಯಕ್ಕೆ ಮಿಥುನ್ ಮತ್ತು ಅಕ್ಷಯ್ ಹಾಗೂ ಅವರ ಸ್ನೇಹಿತರು ಕಾಲೇಜು ಕ್ಯಾಂಪಸ್ಸಿನಿಂದ ಹೊರ ಬಂದಿದ್ದರು. ಇದೇ ಸಂದರ್ಭ ಬೈಕಿನಲ್ಲಿ ಬಂದು ಕಾದು ಕುಳಿತಿದ್ದ ಗಣೇಶ್ ಹಾಗೂ ಆತನ ಹತ್ತು ಜನ ಸ್ನೇಹಿತರು ಗಾಂಧೀ ಮೈದಾನದ ಎದುರುಗಡೆ ರಸ್ತೆಯಲ್ಲಿ ಮಿಥುನ್ ಹಾಗೂ ಅಕ್ಷಯ ಮೇಲೆ ಕಬ್ಬಿಣದ ರಾಡಿನಿಂದ ಏಕಾಏಕೀ ಹಲ್ಲೆ ನಡೆಸಿದ್ದಾರೆ. ಹೊಡೆದಾಟ ಬಿಡಿಸಲುಮುಂದಾದ ಕೆಲವು ಸ್ಥಳೀಯರಿಗೂ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದಾರೆ, ಆದರೆ ಸ್ಥಳೀಯರು ಒಟ್ಟಾಗುತ್ತಿದ್ದಂತೆ ದುಷ್ಕರ್ಮಿ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳು ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ.