ಕುಂದಾಪುರ: ಮನವರಿಕೆ ಮಾಡಿದಷ್ಟೂ ಸಾಮಾಜಿಕ ಅಂತರ ಗಾಳಿಗೆ ತೂರಿ ತರಕಾರಿ ಖರೀದಿಗಾಗಿ ಮುಗಿಬಿದ್ದ ಜನತೆ
ಕುಂದಾಪುರ: ದೇಶದಲ್ಲಿ ಮಹಾಮಾರಿ ಕೊರೋನಾ ವೈರಸಿಗೆ ಜನ ಬಲಿಯಾಗುತ್ತಿದ್ದರೂ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಷ್ಟೇ ವಿನಂತಿಸಿದರೂ ಕೂಡ ಕುಂದಾಪುರದ ಜನತೆ ಮಾತ್ರ ಇದಕ್ಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊರೋನಾ ಬಗ್ಗೆ ಭಯವೇ ಇಲ್ವೇನೋ ಎಂಬಂತೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲದೆ ಮುಗಿಬಿದ್ದು ತರಕಾರಿ ಖರೀದಿಸುವ ದೃಶ್ಯ ಶನಿವಾರ ಕುಂದಾಪುರದಲ್ಲಿ ಸಾಮಾನ್ಯವಾಗಿತ್ತು.
ಪೊಲೀಸ್ ಬಿಗುಬಂದೋಬಸ್ತ್ ನಡುವೆಯೂ ಎಪಿಎಂಸಿ ಆವರಣಗೋಡೆಯಿಂದ ಜಿಗಿದು ಸಾರ್ವಜನಿಕರು ಖರೀದಿಗೆ ಮುಂದಾದರು. ಎಪಿಎಂಸಿಯ ಕಾರ್ಯದರ್ಶಿ ದೀಪ್ತಿ ಸ್ಥಳದಲ್ಲೇ ಇದ್ದು, ಚಿಲ್ಲರೆ ಸಾಮಾನು ಖರೀದಿಗೆ ಬಂದ ಜನರನ್ನು ಹೊರಕಳುಹಿಸಿದರು. ಈ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ಕುಂದಾಪುರ ನಗರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಅದಾಗ್ಯೂ ಮತ್ತೆ ಖರೀದಿಗೆ ಮುಂದಾದ ಸಾರ್ವಜನಿಕರಿಗೆ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಗುಂಪು ಚದುರಿಸಿದರು.
ಇದೇ ವೇಳೆ ಜನರಿಗೆ ಬುದ್ದಿ ಹೇಳಬೇಕಾದ ಪೊಲೀಸ್ ಸಿಬಂದಿಗಳು ಕೂಡ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಗೆ ಮುಂದಾದ ಸಮಯದಲ್ಲಿ ತನ್ನ ಪೊಲೀಸ್ ಸಿಬ್ಬಂದಿಗಳಿಗೆ ಪಿಎಸ್ಐ ಹರೀಶ್ ಆರ್ ನಾಯ್ಕ್ ಪಾಠ ಮಾಡಬೇಕಾದ ಪರಿಸ್ಥಿತಿ ಕೂಡ ಎದುರಾಯಿತು.
ಎಪಿಎಂಸಿ ಆವರಣಕ್ಕೆ ಬಂದ ಸಾರ್ವಜನಿಕರಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಳು ಮನವರಿಕೆ ಮಾಡಿ ಅವರನ್ನು ಹೊರ ಕಳುಹಿಸುವಲ್ಲಿ ಶ್ರಮಿಸುತ್ತಿದ್ದರೆ, ಇನ್ನೂ ಕೆಲ ಪೊಲಿಸ್ ಸಿಬ್ಬಂದಿಗಳು ತಾವು ತಂದ ಕೈಚೀಲ ಹಿಡಿದು ತರಕಾರಿ ಖರೀದಿಸುತ್ತಿರುವ ದೃಶ್ಯ ಕಂಡುಬಂದಿತು. ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬುದ್ದಿ ಮಾತು ಹೇಳಬೇಕಿದ್ದ ಪೊಲೀಸ್ ಸಿಬ್ಬಂದಿಗಳೇ ತರಕಾರಿ ಖರೀದಿಸಲು ಮುಗಿಬಿದ್ದರು. ಸಾರ್ವಜನಿಕ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಕುಂದಾಪುರ ನಗರ ಠಾಣೆಯ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಕರ್ತವ್ಯ ಮರೆತ ಪೊಲೀಸ್ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.