ಕುಂದಾಪುರ: ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ವಿವಿಧ ಕೊಡುಗೆಗಳ ಉದ್ಘಾಟನೆ
ಕುಂದಾಪುರ: ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ದಾನಿಗಳು ಕೊಡಮಾಡಿದ ಪ್ರಯಾಣಿಕರ ತಂಗುದಾಣ (ಶೆಲ್ಟರ್) ಸಹಿತ ವಿವಿಧ ಕೊಡುಗೆಗಳ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.
ಶ್ರೀ ರಾಮ್ ಗ್ರಾನೈಟ್ಸ್ ಕೊಡಮಾಡಿದ ಪ್ರಯಾಣಿಕರ ಶೆಲ್ಟರ್ ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಆಸಕ್ತಿ ವಹಿಸಿ ದಾನಿಗಳ ಮೂಲಕ ನಿಲ್ದಾಣಕ್ಕೆ ಅಗತ್ಯವಿರುವ ವಿವಿಧ ಸೌಕರ್ಯಗಳನ್ನು ಒದಗಿಸಿರುವುದು ಶ್ಲಾಘನೀಯ ಕಾರ್ಯ. ಮುಂದಿನ ದಿನಗಳಲ್ಲಿ ದಾನಿಗಳಿಂದ ಮಾತ್ರವಲ್ಲದೆ ಸರಕಾರದಿಂದಲೂ ಈ ನಿಲ್ದಾಣವನ್ನು ಉತ್ತಮವಾಗಿಸಲು ಸಚಿವರಲ್ಲಿಯೂ ಮನವಿ ಸಲ್ಲಿಸಲಾಗುವುದು ಎಂದರು.
ವಿವಿಧ ಕೊಡುಗೆಗಳನ್ನು ಉದ್ಘಾಟಿಸುತ್ತಿರುವುದು ಸಂತೋಷವಾಗುತ್ತಿದೆ. ರೈಲು ನಿಲ್ದಾಣ ಅತ್ಯಂತ ಚೊಕ್ಕಟವಾಗಿರಬೇಕು. ಫ್ಲಾಟ್ಫಾರ್ಮ್ಗಳು ಹಿರಿಯರಿಗೂ ಸಹ ಅನುಕೂಲ ಆಗುವಂತಿರಬೇಕು. ನಮ್ಮ ಊರು ಚೆಂದ ಇರಬೇಕಾದರೆ, ರೈಲು ನಿಲ್ದಾಣಗಳು ಉತ್ತಮವಾಗಿರಬೇಕು. ಅದಕ್ಕಾಗಿ ಹಿತರಕ್ಷಣಾ ಸಮಿತಿ ಶ್ರಮಿಸುತ್ತಿರುವುದು ಒಳ್ಳೆಯ ಕಾರ್ಯ ಎಂದು ಡಿಜಿಟಲ್ ನಾಮಫಲಕ ಕೊಡುಗೆಯಿತ್ತ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.
ಕೊಂಕಣ್ ರೈಲ್ವೆಯ ಪಿಆರ್ಒ ಸುಧಾ ಕೃಷ್ಣಮೂರ್ತಿ ಪ್ರಯಾಣಿಕರ ಪ್ರಯೋಜನಕ್ಕಾಗಿ ಹಿತರಕ್ಷಣಾ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಕುಂದಾಪುರ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಇನ್ನಷ್ಟು ಪ್ರಯಾಣಿಕರ ಶೆಲ್ಟರ್ ಅಗತ್ಯವಿದೆ. ಈ ನಿಲ್ದಾಣಕ್ಕೆ ಅಮೃತ್ ಭಾರತ್ ಯೋಜನೆ ಹಾಗೂ ಇಲ್ಲಿ ವಂದೇ ಭಾರತ್ ರೈಲು ನಿಲುಗಡೆ ಬಗ್ಗೆ ರೈಲ್ವೇ ಮಂಡಳಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ದೇಶದ 100 ಕಡೆಗಳಿಂದ ಅಯೋಧ್ಯೆಗೆ ರೈಲು ಸಂಚಾರ ಆರಂಭಗೊಳ್ಳಲಿದ್ದು, ಕರಾವಳಿಯಿಂದಲೂ ಆರಂಭಿಸಬೇಕು ಎನ್ನುವುದು ನಮ್ಮ ಬೇಡಿಕೆ. ಪೇಜಾವರ ಶ್ರೀಗಳ ಸಹಕಾರದೊಂದಿಗೆ, ಸಂಸದರು, ಶಾಸಕರು ಪ್ರಯತ್ನವೂ ಬೇಕಾಗಿದೆ. ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿಯಾಗಲಿ ಎಂದು ಸಮಿತಿಯ ಅಧ್ಯಕ್ಷ ಸಮಿತಿಯ ಅ‘ಕ್ಷ ಗಣೇಶ್ ಪುತ್ರನ್ ಹಾಗೂ ಗೌತಮ್ ಶೆಟ್ಟಿ ಒತ್ತಾಯಿಸಿದರು.
ಕೊಂಕಣ್ ರೈಲ್ವೆಯ ಸಹಾಯಕ ಸಂಚಾರಿ ನಿಯಂತ್ರಕ ವಿನಯ್, ದಾನಿಗಳಾದ ಶ್ರೀರಾಮ್ ಗ್ರಾನೈಟ್ಸ್ ಕೋಜು ರಾಮ್ ದೇವಸ್ಯ, ಐಲವ್ ಕುಂದಾಪ್ರ ನಾಮಫಲಕ ನೀಡಿದ ನೇಸರ ಸೈನ್ ಕ್ರಿಯೇಟರ್ಸ್ ಬೆಂಗಳೂರಿನ ಬಿ.ಎನ್. ನರಸಿಂಹ, ರೆಡ್ಕ್ರಾಸ್ ಚೇರ್ಮೆನ್ ಜಯಕರ್ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ರೈಲ್ವೆ ಸಮಿತಿಯ ಗೌರವಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಉಪಾಧ್ಯಕ್ಷ ರಾಜೇಶ ಕಾವೇರಿ, ಪ್ರಮುಖರಾದ ವಿವೇಕ್ ನಾಯಕ್, ರಾಘವೇಂದ್ರ ಶೇಟ್, ನಾಗರಾಜ ಆಚಾರ್, ಪ್ರವೀಣ್ ಕುಮಾರ್, ಉದಯ ಭಂಡಾರ್ಕಾರ್, ಧರ್ಮಪ್ರಕಾಶ್, ಸುಧಾಕರ ಶೆಟ್ಟಿ, ಕೆಂಚನೂರು ಕಿಶನ್, ಲಯನ್ಸ್ನ ರೀಜನಲ್ ಚೇರ್ಮೆನ್ ಏಕನಾಥ್ ಬೋಳಾರ್, ಕೋಟೇಶ್ವರ ರೋಟರಿ ಅಧ್ಯಕ್ಷ ಜಗದೀಶ ಮೊಗವೀರ, ಲಯನ್ಸ್ ಕ್ಲಬ್ ಅಮೃತಧಾರೆ ಅಧ್ಯಕ್ಷೆ ಆಶಾಲತಾ ಶಿವರಾಮ್ ಶೆಟ್ಟಿ, ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಮುಂಬಯಿ ಉದ್ಯಮಿ ಮರಾತೂರು ಸುರೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.