ಕುಂದಾಪುರ: ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡುವ ಹುನ್ನಾರ ನಡೆಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಆದರೇ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡುವುದಿಲ್ಲ. ಅದು ಆಗಬೇಕಾದ ಅವಧಿಯಲ್ಲಿಯೇ ಮಾಡುತ್ತೇವೆ. ಕಾಂಗ್ರೆಸ್
ಚುನಾವಣೆಗೆ ಹೆದರುವುದಿಲ್ಲ. ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಅವರು ಸೋಮವಾರ, ವಾರಾಹಿ ನದಿ ನೀರಾವರಿ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶೋಭಾ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಬದಲು, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ತರಿಸಿಕೊಡಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದ ಸಿದ್ಧರಾಮಯ್ಯ, ಪಶ್ಚಿಮಘಟ್ಟ ಸಂರಕ್ಷಣೆಯ ಕಸ್ತೂರಿರಂಗನ್ ವರದಿಯ ಬಗ್ಗೆಯೂ ಅವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ಕಸ್ತೂರಿರಂಗನ್ ವರದಿಯ ಶಿಫಾರಸುಗಳಿಗೆ ಜನರ ವಿರೋಧವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಜನವಿರೋಧಿ ವರದಿ ಜಾರಿಯಾಗದಂತೆ ಸಂಸದೆ ಶೋಭಾ ಅವರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ವಾರಾಹಿ ನದಿ ನೀರಾವರಿಗೆ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಸಂಸದೆ ಅವರು ಈ ಸಹಾಯ ಸಿಗುವಂತೆ ಮಾಡಬೇಕು ಎಂದು ಸಿದ್ಧರಾಮಯ್ಯ ಸಲಹೆ ಮಾಡಿದರು.
ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದ ಮುಖ್ಯಮಂತ್ರಿಗಳು, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 100ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು.
ನೀರಾವರಿ ಸಚಿವ ಎಂ.ಬಿ.ಪಾಟೀಲ್, ಜಿಲ್ಲಾ ಉಸ್ತುವಾರಿ – ನಗರಾಭಿವೖದ್ಧಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯ ಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್, ಶಾಸಕ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಬಸವರಾಜ್, ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯೆ ಲೀಲಾ ಶೆಟ್ಟಿ, ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ಜಿ.ಪಂ. ಸಿ.ಇ.ಓ. ಕನಗವಲ್ಲಿ, ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ
ಸೋಮಲ್, ತಹಶೀಲ್ದಾರ್ ಗಾಯ್ತರಿ ನಾಯಕ್ ವೇದಿಕೆಯಲ್ಲಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗೋಪಾಲ ಪೂಜಾರಿ ವಹಿಸಿದ್ದರು. ನೀರಾವರಿ ನಿಗಮ ನಿ.ದ ನಿರ್ದೇಶಕ ಆರ್. ರುದ್ರಯ್ಯ ಸ್ವಾಗಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.