ಕುಂದಾಪುರ:  ರತ್ನಾ ಕೊಠಾರಿ ಸಾವಿಗೆ ಒಂದು ವರ್ಷ – ಪರಿಹಾರ ಮತ್ತು, ತನಿಖೆಗೆ ಇಲಾಖೆ , ಶಾಸಕರ ಇಚ್ಚಾ ಶಕ್ತಿ ಕೊರತೆ – ಮುನೀರ್ ಕಾಟಿಪಳ್ಳ ಆಕ್ರೋಶ

Spread the love

ಕುಂದಾಪುರ: ನಿಗೂಢವಾಗಿ ಸಾವನ್ನಪ್ಪಿದ್ದ ಶಿರೂರು ಕಾಲೇಜು ವಿದ್ಯಾರ್ಥಿನಿ, ಕೋಣನಮಕ್ಕಿ ರತ್ನಾ ಕೊಠಾರಿ ಪ್ರಕರಣಕ್ಕೆ ಒಂದು ವರ್ಷ ತುಂಬುತ್ತಾ ಬಂದರೂ ಇದುವರೆಗೆ ಆಕೆಯ ಸಾವಿನ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಸಾವಿನ ಪರಿಹಾರ್ಥ ಆಕೆಯ ಕುಟುಂಬಕ್ಕೆ ನೀಡಲು ಸರ್ಕಾರದ ಪರವಾಗಿ ಬೈಂದೂರು ಶಾಸಕ ಗೋಪಾಲ ಪೂಜಾತರಿ ಘೋಷಣೆ ಮಾಡಿದ್ದ ಮೂರು ಲಕ್ಷ ರೂಪಾಯಿಗಳನ್ನು ಕುಟುಂಬಕ್ಕೆ ವಿತರಿಸಲು ಶಾಸಕರು ವಿಫಲರಾಗಿದ್ದಾರೆ ಎಂದು ಡಿವೈಎಫ್‍ಐ ರಾಜ್ಯಾಧ್ಯಾಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.

1 2

ಗುರುವಾರ ರತ್ನ ಕೊಠಾರಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಳವಾದ ಶಿರೂರಿನ ಸಾವಂತಗುಡ್ಡೆಯಿಂದ ಆರಂಭಗೊಂಡ ಪ್ರತಿಭಟನಾ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಬೈಂದೂರಿನ ಶಾಸಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು.

ಕಳೆದ ಒಂದು ವರ್ಷದಿಂದ ಡಿವೈಎಫ್‍ಐ ಹಾಗೂ ಎಸ್‍ಎಫ್‍ಐ ಸಂಘಟನೆಗಳು ನಿರಂತರವಾಗಿ ವಿದ್ಯಾರ್ಥಿನಿರ ಸಾವಿನ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಹಲವು ರಾಜಕೀಯ ಪಕ್ಷಗಳು ಘಟನೆ ನಡೆದ ತಕ್ಷಣಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದ್ದು, ನಿಗೂಢ ಸಾಔಇನ ಲಾಭ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುನೀರ್, ಕರಾವಳಿಯಲ್ಲಿ ಆತಂಕಕೆಡೆಮಾಡಿಕೊಡುತ್ತಿರುವ ಹೆಣ್ಣು ಮಕ್ಕಳ ಸಾವಿನ ಬಗ್ಗೆ ಯಾವುದೇ ತನಿಖೆಯ ಪ್ರಕ್ರಿಯೆಗಳಿಗೆ ಒತ್ತಾಯಿಸದೇ ಇರುವುದು ಆತಂಕಕಾರಿ ವಿಚಾರ ಎಂದು ಆರೋಪಿಸಿದರು.

ರತ್ನಾ ಕೊಠಾರಿ ವಿಚಾರದಲ್ಲಿ ಸರ್ಕಾರ ಹಾಗೂ ಇಲಾಖೆ ತನ್ನ ಇಚ್ಚಾ ಶಕ್ತಿಯ ಕೊರತೆಯನ್ನು ಪ್ರದರ್ಶಿಸುತ್ತಿದ್ದು, ಇನ್ನಾದರೂ ಬೈಂದೂರು ವಲಯದ ಶಾಸಕರಾಗಿ ಜನಸಾಮಾನ್ಯರ ಮತಗಳನ್ನು ಪಡೆದು ಆಯ್ಕೆಯಾಗಿ ಕುಳಿತಿರುವ ಶಾಸಕ ಗೋಪಾಲ ಪೂಜಾರಿ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮೃತಳ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‍ಶೀಟ್ ಸಲ್ಲಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನೆ ತರಾಟೆಗೆತ್ತಿಕೊಂಡು ಚಾರ್ಜ್‍ಶೀಟ್ ಸಲ್ಲಿಸುವಂತೆ ಮಾಡುವ ಮೂಲಕ ಸರ್ಕಾರ ಘೋಷಣೆ ಮಾಡಿದ ರೂ ಮೂರು ಲಕ್ಷ ಪರಿಹಾರ ಹಾಗೂ ಪೊಲೀಸ್ ಇಲಾಖೆಯಿಂದ ಸಿಗುವ ಮೂರು ಲಕ್ಷ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಶಾಸಕರ ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕರಾವಳಿಯಲ್ಲಿ ಇಷ್ಟೆಲ್ಲಾ ಪ್ರಕರಣಗಳು, ದೌರ್ಜನ್ಯಗಳು ನಡೆಯುತ್ತಿದ್ದರೂ ಪ್ರಕರಣವನ್ನು ಬೇಧಿಸಲಾಗದ ಪೊಲೀಸ್ ಇಲಾಖೆ ಹೆಚ್ಚಿನ ತನಿಖೆ ನಡೆಸಲು ಅನುಕೂಲವಾಗುವಂತೆ ಖಾಸಗೀ ತನಿಖಾ ತಂಡಗಳನ್ನು ನೇಮಿಸುವಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂದವರು ಆಗ್ರಹಿಸಿದರು.

ರತ್ನಾ ಕೊಠಾರಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಳವಾದ ಸಾವಂತಗುಡ್ಡೆಯಲ್ಲಿ ಆರಂಭಗೊಂಡ ಕಾಲ್ನಡಿಗೆ ಜಾಥಾಕ್ಕೆ ಸಿಐಟಿಯು ಮುಖಂಡ ಹೆಚ್. ನರಸಿಂಹ ಚಾಲನೆ ನೀಡಿದರು. ಸುಮಾರು ಹತ್ತು ಕಿ.ಮೀ. ದೂರದ ಕಾಲ್ನಡಿಗೆ ಜಾಥಾವು ಸಾವಂತಗುಡ್ಡೆಯಿಂದ ಸಾಗಿ ಶಿರೂರುಗೆ ಬಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಬೈಂದೂರು ಶಾಸಕರ ಕಚೇರಿ ಮುಂದೆ ಪ್ರತಿಭಟನಾ ಸಭೆಯೊಂದಿಗೆ ಸಮಾಪನಗೊಂಡಿತು.

 


Spread the love