ಕುಂದಾಪುರ ಸರ್ಕಾರಿ ಆಸ್ಪತ್ರೆಯ ಕುರಿತು ವಿಡಿಯೋ: ವ್ಯಕ್ತಿಯ ವಿರುದ್ದ ದೂರು
ಕುಂದಾಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ ವ್ಯಕ್ತಿಯ ವಿರುದ್ದ ಕುಂದಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಟ್ಟಿಕುದ್ರು ನಿವಾಸಿ ದುಂಡಿರಾಜ್ ಪೂಜಾರಿ (47) ಎಂಬವರ ವಿರುದ್ದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ ನಾಗೇಶ್ ಪುತ್ರನ್ ನೀಡಿರುವ ದೂರಿನ ಮೇಲೆ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ದುಂಡಿರಾಜ್ ಪೂಜಾರಿ ಕೋವಿಡ್-19 ನಿಂದ ಮೃತಪಟ್ಟ ಕುಂದಾಪುರ ಮೂಲದ ವ್ಯಕ್ತಿಯೋರ್ವರಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ ಎಂದು ಆರೋಪಿಸಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದರಿಂದಾಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ನೈತಿಕಸ್ಥೈರ್ಯ ಕುಂದುವಂತೆ ಮಾಡಿದ್ದು, ಸರ್ಕಾರಿ ಆಸ್ಪತ್ರೆಯ ತೇಜೋವಧೆ ಮಾಡಿರುವ ದುಂಡಿರಾಜ್ ವಿರುದ್ದ ಕ್ರಮಕೈಗೊಳ್ಳುವಂತೆ ಡಾ. ನಾಗೇಶ್ ದೂರು ನೀಡಿದ್ದಾರೆ.
ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದ ಕೋವಿಡ್-19 ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಮೃತಪಟ್ಟ ಕುಂದಾಪುರ ಮೂಲದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಿದ್ದೇವೆ. ಉಸಿರಾಟದ ಸಮಸ್ಯೆ ತೀವ್ರಗೊಂಡಾಗ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕಳುಹಿಸಿದ್ದೇವೆ. ಈ ವೇಳೆಯಲ್ಲಿ ಅವರು ಮೃತಪಟ್ಟಿದ್ದಾರೆ. ಇದರಲ್ಲಿ ನಾವು ಕರ್ತವ್ಯ ಲೋಪ ಮಾಡಿಲ್ಲ. ಆಸ್ಪತ್ರೆಯ ವಿರುದ್ದ ಮಾಡಲಾದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.