ಕುಂದಾಪುರ| ಸಹಕಾರ ಸಂಸ್ಥೆಯಿಂದ ಕೋಟ್ಯಂತರ ರೂ. ವಂಚನೆ ಆರೋಪ: ಪ್ರಕರಣ ದಾಖಲು
ಕುಂದಾಪುರ: ಕುಂದಾಪುರ ಸೌಹಾರ್ದ ಕ್ರೆಡಿಕ್ ಕೋ ಆಪರೇಟಿವ್ ಲಿಮಿಟೆಡ್ನಿಂದ ಠೇವಣಿದಾರರಿಗೆ ಹಣವನ್ನು ವಾಪಾಸ್ಸು ನೀಡದೇ ಕೋಟ್ಯಂತರ ರೂ. ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ನಿವಾಸಿ ಶ್ರೀಧರ್ ಎಂಬುವರು ತಮ್ಮ ಇಬ್ಬರು ಮಗಳಿಂದರ ಹೆಸರಿನಲ್ಲಿ ಕ್ರಮವಾಗಿ ರೂ 2 ಲಕ್ಷ ಮತ್ತು ರೂ 5 ಲಕ್ಷ ಠೇವಣಿ ಇಟ್ಟಿದ್ದು ಠೇವಣಿ ಹಣವು ವಾಯಿದೆ ಮುಗಿದರೂ ಸದ್ರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಕರು ಮತ್ತು ನಿರ್ದೇಶಕರುಗಳಾಗಿರುವ ಆರೋಪಿತರು ಪಿರ್ಯಾದಿದಾರರ ಮಕ್ಕಳ ಠೇವಣಿ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ, ನಿರ್ದೇಶಕರುಗಳಾದ ಪ್ರಕಾಶ ಲೋಬೋ, ಮಹೇಶ ಲಕ್ಷ್ಮಣ ಕೊತ್ವಾಲ, ವಿಠಲ, ಅವಿನಾಶ ಪಿಂಟೋ, ಕೆ.ರಾಜೇಶ ದೈವಜ್ಞ, ಎಚ್.ಮಹಾಬಲ, ರತ್ನಾಕರ, ದಯಾನಂದ, ಮರ್ವಿನ ಫೆರ್ನಾಂಡಿಸ್, ಸರೋಜ, ಸುಧಾಕರ, ಗೋಪಾಲ, ಡಾ.ದಿನಕರ ಸೇರಿಕೊಂಡು ಒಳಸಂಚು ರೂಪಿಸಿ ಸುಮಾರು 44 ಮಂದಿಯ ಒಟ್ಟು 7,25,24,831ರೂ. ಠೇವಣಿ ಹಣವನ್ನು ವಾಯಿದೆ ಮುಗಿದರೂ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.