ಕುಂದಾಪುರ: 6 ತಿಂಗಳ ತೆರಿಗೆ ಮನ್ನಾ ಮಾಡಲು ಲಾರಿ ಮ್ಹಾಲಕರ ಸಂಘ ಸಚಿವರಿಗೆ ಮನವಿ

Spread the love

ಕುಂದಾಪುರ: 6 ತಿಂಗಳ ತೆರಿಗೆ ಮನ್ನಾ ಮಾಡಲು ಲಾರಿ ಮ್ಹಾಲಕರ ಸಂಘ ಸಚಿವರಿಗೆ ಮನವಿ

ಕುಂದಾಪುರ: ಲಾಕ್ಡೌನ್ನಿಂದಾಗಿ ಕಳೆದ 45 ದಿನಗಳಿಂದ ಯಾವುದೇ ವಹಿವಾಟುಗಳಿಲ್ಲದೆ, ಎಲ್ಲಾ ವಿಭಾಗದ ಕೈಗಾರಿಕೆಗಳು ಕೂಡ ಮುಚ್ಚಿರುವುದರಿಂದ ಲಾರಿಗಳ ಮಾಲಕರು ಹಾಗೂ ಚಾಲಕರು ತುಂಬಾ ಸಂಕಷ್ಟದಲ್ಲಿದ್ದು, ಅವರಿಗೂ ಕೂಡ ರಾಜ್ಯ ಸರಕಾರ ಸಹಾಯ ನೀಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಲಾರಿ ಓನರ್ಸ್ ಅಸೋಸಿಯೇಶನ್ ಕುಂದಾಪುರದಲ್ಲಿ ಮನವಿ ಸಲ್ಲಿಸಿದೆ.

ಲಾರಿ ಮಾಲಕರಿಗೆ ಹಾಗೂ ಚಾಲಕರಿಗೆ ತಿಂಗಳಿಗೆ 5 ಸಾವಿರ ರೂ. ಅಂತೆ ಖಾತೆಗೆ ಹಾಕಬೇಕು, ಲಾರಿಗಳ 6 ತಿಂಗಳ ತೆರಿಗೆಯನ್ನು ಮನ್ನಾ ಮಾಡಬೇಕು ಹಾಗೂ ಚಾಲಕ – ಮಾಲಕರ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಬೇಕು ಎನ್ನುವ 3 ಪ್ರಮುಖ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಿದರು.

ಕೊರೊನಾ ಮಧ್ಯೆಯೂ ಕೆಲವು ಲಾರಿಗಳು ಜನರ ನೆರವಿಗಾಗಿ ಅಪಾಯವನ್ನು ಲೆಕ್ಕಿಸದೇ ಹೊರ ಜಿಲ್ಲೆ, ಬೇರೆ ರಾಜ್ಯಗಳಿಗೆ ಹೋಗಿ ಅಗತ್ಯದ ಆಹಾರ ಸಾಮಗ್ರಿಗಳನ್ನು ತಂದು ಕೊಡುವಲ್ಲಿ ನೆರವಾಗುತ್ತಿದ್ದಾರೆ. ಬೇರೆ ಬೇರೆ ವರ್ಗದದವರಿಗೆ ಸರಕಾರ ಸಹಾಯಧನ ಕೊಟ್ಟಿದ್ದು, ಆದರೆ ಲಾರಿ ಚಾಲಕ, ಮಾಲಕರನ್ನು ನಿರ್ಲಕ್ಷ್ಯ ಮಾಡಿರುವುದು ನೋವಿನ ಸಂಗತಿ ಎಂದು ಈ ವೇಳೆ ಸಂಘದ ಸದಸ್ಯರು ಅಹವಾಲು ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಲಾರಿ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರಾಜೇಶ್ ಕಾವೇರಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸುವರ್ಣ, ಕುಂದಾಪುರ ತಾ| ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪ್ರ. ಕಾರ್ಯದರ್ಶಿ ಶಂಕರ್ ಪೂಜಾರಿ, ಮಾಜಿ ಅಧ್ಯಕ್ಷರಾದ ಶೇಖರ್ ಪೂಜಾರಿ, ರವಿರಾಜ್ ವಂಡ್ಸೆ, ರಮೇಶ್ ಕುಂದರ್, ಅರುಣ್ ಬಾಣ, ಸದಸ್ಯರಾದ ಅನಿಲ್ ಡಿ.ಎಸ್., ಕೆ.ಟಿ. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.


Spread the love