ಕುಡಿದ ಅಮಲಿನಲ್ಲಿ ಕಾರು ಚಾಲನೆ; ಅಂಡರ್ ಪಾಸ್ ಗೋಡೆಗೆ ಡಿಕ್ಕಿ – ತಪ್ಪಿದ ದುರಂತ
ಉಡುಪಿ: ಇತ್ತೀಚೆಗಷ್ಟೇ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ನಿಂತಿದ್ದ ರಿಕ್ಷಾವೊಂದಕ್ಕೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಮಾಯಕ ರಿಕ್ಷಾ ಚಾಲಕನ ಸಾವಿಗೆ ಕಾರಣವಾದ ಘಟನೆ ಹಸಿಯಾಗಿರುವಾಗಲೇ ಅಂತಹುದೇ ಇನ್ನೊಂದು ಘಟನೆ ಉಡುಪಿಯಲ್ಲಿ ನಡೆಯುವುದು ಸ್ವಲ್ಪದರಲ್ಲೇ ತಪ್ಪಿದೆ.
ಉಡುಪಿಯ ನಿವಾಸಿ ಜಯ ಎಂಬುವರು ಭಾನುವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ತಮ್ಮ ಸ್ವಿಫ್ಟ್ ಡಿಸಾಯರ್ ಕಾರನ್ನು ಭಾನುವಾರ ರಾತ್ರಿ ಚಲಾಯಿಸಿಕೊಂಡು ಬಂದಿದ್ದು, ಕುಡಿದ ಅಮಲಿನಲ್ಲಿ ನಿಯಂತ್ರಣ ತಪ್ಪಿದ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ, ಕರಾವಳಿ ಜಂಕ್ಷನ್ ಇದರ ಅಂಡರ್ ಪಾಸ್ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ.
ಅದೃಷ್ಟವಶಾತ್ ಘಟನೆಯಿಂದ ಕಾರಿನಲ್ಲಿದ್ದ ಜಯ ಅವರಿಗೆ ಯಾವುದೇ ರೀತಯ ನೋವು ಸಂಭವಿಸಿಲ್ಲ. ಆದರೆ ಹಗಲು ಹೊತ್ತಿನಲ್ಲಿ ಘಟನೆ ನಡೆದಿದ್ದರೆ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ವಿಪರೀತ ಮದ್ಯಪಾನ ಮಾಡಿದ ಜಯ ಅವರನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.
ಘಟನೆಯಿಂದ ಸ್ವಲ್ಪಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳೀಯರು ಹಾಗೂ ಟ್ರಾಫಿಕ್ ಪೋಲಿಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.