ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಯೋಜನೆ ರೂಪಿಸಿ – ಸಚಿವ ರಹೀಂ ಖಾನ್ ಸೂಚನೆ

Spread the love

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಯೋಜನೆ ರೂಪಿಸಿ – ಸಚಿವ ರಹೀಂ ಖಾನ್ ಸೂಚನೆ

ಮಂಗಳೂರು: ನಗರ, ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಯೋಜನೆ ರೂಪಿಸಿ, ಕಾರ್ಯಗತಗೊಳಿಸುವಂತೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಸೂಚಿಸಿದ್ದಾರೆ.

ಅವರು ಸೋಮವಾರ ಕೋಟೆಕಾರು ಪಟ್ಟಣ ಪಂಚಾಯತ್ಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡುತ್ತಿದ್ದರು. ನೀರಿನ ಮೂಲದಿಂದ ಮನೆಗೆ ತಲುಪುವ ತನಕ ನೀರಿನ ಸಂಗ್ರಹ ಮತ್ತು ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು. ಜನರು ಕುಡಿಯುವ ನೀರಿಗೆ ಪರದಾಡುವಂತಹ ಸನ್ನಿವೇಶ ಯಾವುದೇ ಕಾರಣಕ್ಕೂ ಉದ್ಭವವಾಗದಂತೆ ನೊಡಿಕೊಳ್ಳಬೇಕು. ಕೊನೆಯ ಕ್ಷಣದಲ್ಲಿ ಕಾರ್ಯಪ್ರವೃತ್ತರಾಗುವ ಬದಲು ಮುಂದಾಲೋಚನೆಯಿಂದ ಯೋಜನೆಗಳನ್ನು ರೂಪಿಸಿದರೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗದು ಎಂದು ಸಚಿವರು ತಿಳಿಸಿದರು.

ಅಭಿವೃದ್ಧಿ ಕಾಮಗಾರಿ, ಫಲಾನುಭವಿ ಆಧಾರಿತ ಯೋಜನೆಗಳು, ಸಮುದಾಯ ಕಾರ್ಯಕ್ರಮಗಳನ್ನು ಆಯಾ ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಬಾಕಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿ, ಆರ್ಥಿಕ ಸಂಪನ್ಮೂಲಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ರಹೀಂ ಖಾನ್ ತಿಳಿಸಿದರು.

ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರು ನಗರ ಪಂಚಾಯತ್ ವ್ಯಾಪ್ತಿ ಪ್ರದೇಶಗಳು ಪರಸ್ಪರ ಹತ್ತಿರದಲ್ಲಿವೆ. ಪ್ರಸ್ತುತ ಈ ಎಲ್ಲ ಪಟ್ಟಣ ಪ್ರದೇಶಗಳಲ್ಲೂ ತ್ಯಾಜ್ಯ ನಿರ್ವಹಣಾ ಘಟಕಗಳು ಇರುವುದಿಲ್ಲ. ಈ ನಿಟ್ಟಿನಲ್ಲಿ ಮೂರು ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯಗಳನ್ನು ನಿರ್ವಹಿಸಲು ಒಂದೇ ಕಡೆ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾಧ್ಯಕ್ಷರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ಯೋಚನೆಯಾಗಿದೆ. ಇದರಿಂದ ಈ ಎಲ್ಲ ಪ್ರದೇಶಗಳ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ದೊಡ್ಡ ಮಟ್ಟದ ಘಟಕ ಸ್ಥಾಪಿಸುವ ಮೂಲಕ ನಿರ್ವಹಿಸಬಹುದಾಗಿದೆ. ಈ ಯೋಜನೆ ಕಾರ್ಯಗತಗೊಳಿಸಲು ರಾಜ್ಯ ಸರಕಾರ ಅಗತ್ಯ ಅನುದಾನ ನೀಡಲಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.

ಸಚಿವರು ಕೋಟೆಕಾರು ಪಟ್ಟಣ ಪಂಚಾಯತ್ ಅಭಿವೃದ್ಧಿ ಕಾಮಗಾರಿಗಳ ವಿವರ ಪಡೆದು, ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಾದ ಪುರಂದರ ಕೋಟ್ಯಾನ್, ತೇಜಮೂರ್ತಿ. ಕೋಟೆಕಾರು ಪ.ಪಂ. ಮುಖ್ಯಾಧಿಕಾರಿ ಮಾಲಿನಿ, ಪ.ಪಂ. ಸದಸ್ಯರು ಉಪಸ್ಥಿತರಿದ್ದರು.


Spread the love