ಕುಡಿಯುವ ನೀರು ಒದಗಿಸುವಲ್ಲಿ ಶಾಸಕ ರಘುಪತಿ ಭಟ್ ವಿಫಲ – ಕಾಂಗ್ರೆಸ್ ಟೀಕೆ
ಉಡುಪಿ: ಪ್ರಮೋದ್ ಮಧ್ವರಾಜರು ಶಾಸಕರಾಗುವ ಮೊದಲು ಉಡುಪಿ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರನ್ನು ತನ್ನ ಸ್ವಂತ ಖರ್ಚಿನಲ್ಲಿ ಅವಶ್ಯಕತೆ ಇರುವವರಿಗೆ ಟ್ಯಾಂಕರ್ ಮೂಲಕ ವ್ಯವಸ್ಥೆಗೊಳಿಸಿದ್ದರು. ಶಾಸಕರಾದ ನಂತರ ರಾಜ್ಯ ಸರಕಾರದ ಟಾಸ್ಕ್ ಫೋರ್ಸ್ ಮುಖಾಂತರ ಅನುದಾನವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಅಭಾವವಿರುವ ಪ್ರದೇಶಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಶಾಸಕರಾಗುವಾಗ ಉಡುಪಿ ಕ್ಷೇತ್ರದಲ್ಲಿ 24×7 ನೀರು ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದರು.
ಪ್ರಮೋದ್ ಮಧ್ವರಾಜರು ಶಾಸಕರಾಗಿದ್ದ 5 ವರ್ಷಗಳಲ್ಲಿ ಪ್ರತೀ ವರ್ಷ ಜನವರಿ ತಿಂಗಳಲ್ಲಿ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ಕರೆದು ಲಭ್ಯವಿರುವ ನೀರಿನ ಮಾಹಿತಿ ಪಡೆದು ಆ ನೀರನ್ನು ಮಿತವಾಗಿ ಬಳಕೆ ಮಾಡುವ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಂತೆ ನಿರ್ದೇಶಿಸಿ ಸರಕಾರಿ ಬಾವಿಗಳನ್ನು ಹಾಗೂ ಬೋರ್ವೆಲ್ಗಳನ್ನು ಸುಸ್ಥಿತಿಯಲ್ಲಿಡುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ನೀರಿನ ಬೇಡಿಕೆ ಹಾಗೂ ಲಭ್ಯತೆ ಬಗ್ಗೆ ಆಗಾಗ್ಗೆ ಅಧಿಕಾರಿಗಳ ಸಭೆ ಕರೆದು ನೀರಿಲ್ಲದ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ಜನರಿಗೆ ನೀರನ್ನು ದೊರಕಿಸುವ ಕೆಲಸಕ್ಕೆ ಬೇಕಾದ ಅನುದಾನವನ್ನು ರಾಜ್ಯ ಸರಕಾರದಿಂದ ಒದಗಿಸುವ ಕಾರ್ಯವನ್ನು ಮಾಡಿದ್ದರಿಂದ ಶಾಸಕತ್ವದ ಅವಧಿಯ 5 ವರ್ಷಗಳಲ್ಲಿ ಏಪ್ರಿಲ್ ಮೇ ತಿಂಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಪ್ರಮೋದ್ ಮಧ್ವರಾಜರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಸಮರೋಪಾದಿಯಲ್ಲಿ ಸರ್ವ ಪ್ರಯತ್ನ ಮಾಡಲಾಗಿತ್ತು.
ಉಡುಪಿ ನಗರಸಭೆಯ 35 ವಾರ್ಡ್ಗಳಲ್ಲಿ ದಿನದ 24 ಗಂಟೆ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಅಧಿಕಾರಿಗಳ ಟಾಸ್ಕ್ ಫೋಸ್ ರಚಿಸಿ ಪ್ರತೀ ವಾರ್ಡಿಗೆ ಒಬ್ಬ ಅಧಿಕಾರಿಯನ್ನು ಉಸ್ತುವಾರಿಗೆ ನೇಮಿಸಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎತ್ತರ ಪ್ರದೇಶದಲ್ಲಿರುವವರಿಗೆ ಹಾಗೂ ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗಿತ್ತು.
2017ರಲ್ಲಿ ಉಡುಪಿ ನಗರಕ್ಕೆ ಬಜೆ ಅಣೆಕಟ್ಟಿನಿಂದ ಪೂರೈಸುವ ಕುಡಿಯುವ ನೀರಿನ ಜಲಾಶಯ ಏಪ್ರಿಲ್ ತಿಂಗಳ 23ನೇ ತಾರೀಕಿನಂದು ಬರಿದಾದಾಗ(ಡೆಡ್ ಸ್ಟೋರೇಜ್) ಪ್ರಮೋದ್ ಮಧ್ವರಾಜ್ರವರ ಸೂಚನೆಯಂತೆ ಬಂಡಾರಿಬೆಟ್ಟು, ಶೀರೂರು, ಮಠದಗುಂಡಿ, ಮಾಣಾಯಿ ಶೀರೂರು ಅಣೆಕಟ್ಟು ಪ್ರದೇಶದಲ್ಲಿ ಹಾಗೂ ಪುತ್ತಿಗೆ ಮಠದ ಬಳಿ ಅಲ್ಲಲ್ಲಿ ಹೊಂಡದಲ್ಲಿರುವ ನೀರನ್ನು ಪಾದೆಯನ್ನು ಒಡೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ ಎಂಟು ಬೋಟ್ಗಳ ಮುಖಾಂತರ ಬೃಹತ್ ಪಂಪ್ಗಳನ್ನು ಅಳವಡಿಸಿ ಪಂಪಿಂಗ್ ಮಾಡಿ ನೀರನ್ನು ಬಂಡಾರಿಬೆಟ್ಟಿನಿಂದ ಬೃಹತ್ ಕೊಳವೆ ಮುಖಾಂತರ ಬಜೆ ಅಣೆಕಟ್ಟಿನ ನೀರು ಶುದ್ಧೀಕರಣ ಘಟಕಕ್ಕೆ ಹಾಯಿಸಿ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ ಕಾರ್ಯವನ್ನು ಮಾಡಿದ್ದರು. ಜನವರಿ ತಿಂಗಳಲ್ಲಿ ಉಡುಪಿ ಕ್ಷೇತ್ರದ ಸರಕಾರಿ ಬಾವಿಗಳನ್ನು ಗುರುತಿಸಿ ಶುದ್ದೀಕರಿಸಿ ಬೋರ್ವೆಲ್ಗಳನ್ನು ಸುಸ್ಥಿತಿಗೆ ತಂದು ಟ್ಯಾಂಕರ್ ಮೂಲಕ ಉಡುಪಿಯ ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು 2018ರಲ್ಲಿ ಮಾರ್ಚ್ ತಿಂಗಳಿನಿಂದ ಉಡುಪಿ ನಗರದ 35 ವಾರ್ಡ್ಗಳನ್ನು ಎರಡು ವಲಯಗಳಾಗಿ ವಿಂಗಡಿಸಿ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವ ಮೂಲಕ ಮೇ ತಿಂಗಳ 2ನೇ ವಾರದ ತನಕ ನೀರನ್ನು ಮಿತವಾಗಿ ಸರಬರಾಜು ಮಾಡಲಾಗಿತ್ತು.
ಆದರೆ ಈ ಬಾರಿ ಕುಡಿಯುವ ನೀರನ್ನು ಲೋಕಸಭಾ ಚುನಾವಣೆ ನಿಮಿತ್ತ ಏಪ್ರಿಲ್ 18ರವರಗೆ ಮಾತ್ರ ಶಾಸಕರಾದ ರಘುಪತಿ ಭಟ್ಟರ ಒತ್ತಡದ ಮೇರೆಗೆ ಯಾವುದೇ ಪಡಿತರ ಮಾಡದೆ ಕೊಟ್ಟಿರುವುದರಿಂದ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಖಾಲಿಯಾಗಿದ್ದು ಏಪ್ರಿಲ್ 19ರಿಂದ ನೀರಿನ ಅಭಾವ ಉಡುಪಿ ನಗರದಾದ್ಯಂತ ಒಮ್ಮೆಲೇ ಪ್ರಾರಂಭವಾಗಿದೆ. ಉಡುಪಿ ಜನತೆಗೆ ಕುಡಿಯುವ ನೀರನ್ನು ನೀಡುವಲ್ಲಿ ಶಾಸಕರಾದ ರಘುಪತಿ ಭಟ್ರವರು ಸಂಪೂರ್ಣ ವಿಫಲರಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಬಜೆ ಅಣೆಕಟ್ಟಿನಲ್ಲಿ ನೀರಿನ ಒಳ ಹರಿವು ನಿಲ್ಲುವುದರಿಂದ ಲಭ್ಯವಿರುವ ಸಂಗ್ರಹವಾದ ನೀರನ್ನು ಮಿತವಾಗಿ ಬಳಸುವುದರಿಂದ ಮಾತ್ರ ನೀರಿನ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವಾರಾಹಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಮೋದ್ ಮಧ್ವರಾಜರು ಅವಿರತ ಶ್ರಮ ವಹಿಸಿದ್ದರು. ಕೇಂದ್ರದ ಅಮೃತ್ ಯೋಜನೆ, ಎಡಿಬಿ ನೆರವಿನಿಂದ ರಾಜ್ಯ ಸರಕಾರ ಹಾಗೂ ಉಡುಪಿ ನಗರಸಭೆಯ ಪಾಲುದಾರಿಕೆಯಿಂದ ಕುಡ್ಸೆಂಪ್ ಮುಖಾಂತರ ಕಾಮಗಾರಿ ನಿರ್ವಹಿಸಲು 320 ಕೋಟಿ ರೂಪಾಯಿ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ವರಾಹಿ ಕುಡಿಯುವ ನೀರಿನ ಯೋಜನೆಯ 3 ಹಂತದ ಕಾಮಗಾರಿಗಳ ಪ್ಯಾಕೇಜ್ ಟೆಂಡರ್ ಆಗಿತ್ತು. ಆದರೆ ಇತ್ತೀಚೆಗೆ ಪಂಪಿಂಗ್ ಸ್ಟೇಶನ್ (ನೀರು ಶುದ್ಧೀಕರಣ ಘಟಕ) ಭರತ್ಕಲ್ನಲ್ಲಿಯೇ ಮಾಡುವ ನಿರ್ಧಾರದಿಂದ ಒಂದನೇ ಹಂತದ ಟೆಂಡರನ್ನು ಪುನಃ ಕರೆಯಬೇಕಾಗಿದೆ. 2ನೇ ಹಂತದ ಪ್ಯಾಕೇಜ್ ಪೈಪ್ ಲೈನ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ ಮತ್ತು ಕಾಮಗಾರಿ ಪ್ರಾರಂಭ ಹಂತದಲ್ಲಿದೆ. ಮೂರನೇ ಹಂತದ ಪ್ಯಾಕೇಜ್ ಉಡುಪಿ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ಗಳ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು ನಿರ್ಮಾಣ ಹಂತದಲ್ಲಿದೆ. ಪ್ರಮೋದ್ ಮಧ್ವರಾಜರು ಪುನಃ ಶಾಸಕರಾಗಿದ್ದರೆ ಬಹುಶ ಅನುಷ್ಠಾನ ಹಂತದಲ್ಲಿರುವ ವಾರಾಹಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ವೇಗವನ್ನು ಪಡೆಯುತ್ತಿತ್ತೇನೋ ಎಂದು ಜನರಾಡಿಕೊಳ್ಳುವಂತಾಗಿದೆ.
ಕರ್ನಾಟಕದ 224 ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಿಯೂ ನಿರಂತರ ವಿದ್ಯುತ್ ಸರಬರಾಜು ಇಲ್ಲದಿದ್ದ ಸಂದರ್ಭದಲ್ಲಿ ಉಡುಪಿ ಕ್ಷೇತ್ರದಲ್ಲಿ 24 ಗಂಟೆ ನಿರಂತರ ವಿದ್ಯುತ್ ( ದುರಸ್ಥಿ ಮತ್ತು ತಾಂತ್ರಿಕ ಅಡಚಣೆ ಹೊರತು ಪಡಿಸಿ) ನೀಡಲು ಪ್ರಮೋದ್ ಮಧ್ವರಾಜರು ಯಶಸ್ವಿಯಾಗಿದ್ದರು. ಆ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ, ಕೈಗಾರಿಕೆಗಳಿಗೆ ಉತ್ಪಾದನೆಗೆ, ವಾಣಿಜ್ಯೋದ್ಯಮಿಗಳಿಗೆ ವ್ಯಾಪಾರಕ್ಕೆ, ರೈತರಿಗೆ ಪಂಪ್ ಸೆಟ್ಗಳಿಗೆ ನಿರಂತರ ವಿದ್ಯುತ್ನಿಂದ ನೆರವಾಗಿತ್ತು. ಈಗ ವಿದ್ಯುತ್ ಆಗಾಗ್ಗೆ ಕಡಿತಗೊಳ್ಳುವುದು ಸರ್ವೆ ಸಾಮಾನ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಯುವರಾಜ್ ಮತ್ತು ಮೀನಾಕ್ಷಿ ಮಾಧವ, ನಗರಸಭಾ ಸದಸ್ಯರುಗಳಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಸೆಲಿನ್ ಕರ್ಕಡ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಮೊದಲಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.