ಕುಡುಪು ಅನಂತಪದ್ಮನಾಭ ದೇವಸ್ಥಾನ ಶಾಸ್ತ್ರೀಯವಾಗಿ ನಿರ್ಮಾಣಗೊಂಡಿದೆ: ಶ್ರೀ ಅನಂತಪದ್ಮನಾಭ ಅಸ್ರಣ್ಣ
ಮಂಗಳೂರು: ಕುಡುಪು ಅನಂತಪದ್ಮನಾಭ ದೇವಸ್ಥಾನ ಜೀರ್ಣೋದ್ಧಾರದಿಂದ ಶಾಸ್ತ್ರಿಯವಾಗಿ ಅಚ್ಚುಕಟ್ಟಾಗಿ ಯಾವುದೇ ನ್ಯೂನ್ಯತೆ ಇಲ್ಲದೇ ನಿರ್ಮಾಣವಾದ ಕ್ಷೇತ್ರವಾಗಿದೆ. ಶ್ರೀ ಅನಂತಪದ್ಮನಾಭ ದೇವಸ್ಥಾನ ಉತ್ತಮ ಸಾನಿಧ್ಯವಿರುವ ಈ ಕ್ಷೇತ್ರ ಬಹಳ ಎತ್ತರಕ್ಕೆ ಬೆಳೆದಿದೆ ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಅಸ್ರಣ್ಣ ಹೇಳಿದರು.
ಅವರು ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಗುರುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಜೀರ್ಣೋದ್ಧಾರಗೊಳ್ಳುವ ಕ್ಷೇತ್ರಗಳ ಕೆಲಸವನ್ನು 108 ದಿನಗಳಲ್ಲಿ ಮುಗಿಸಬೇಕೆಂಬ ತರಾತುರಿಯಲ್ಲಿ ಕಾರ್ಯ ಮಾಡುತ್ತಾರೆ. ಇದರಲ್ಲಿ ಒಂದಲ್ಲ ಒಂದು ನ್ಯೂನ್ಯತೆ ಬರುತ್ತದೆ. ದೇವರ ಗರ್ಭಗುಡಿ ನಿರ್ಮಾಣದಲ್ಲಿ ಒಂದೊಂದು ಭಾಗದ ಕೆಲಸ ಮಾಡುತ್ತಾ ವಿಳಂಬ ಮಾಡುವುದು ಹೆಚ್ಚು. ದ.ಕ. ಜಿಲ್ಲೆಯಲ್ಲಿ ಪ್ರತಿಯೊಂದು ಕಾರ್ಯದಲ್ಲಿ ಅವಸರದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರಿಂದ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ. ಹೊರಗಿನ ವೈಭವಕ್ಕಿಂತ ಸಾನಿಧ್ಯಕ್ಕೆ ಪೂರಕವಾದ ಕಾರ್ಯಕ್ಕೆ ಒತ್ತುಕೊಡಬೇಕು. ದ.ಕ. ಜಿಲ್ಲೆಯ ಕ್ಷೇತ್ರಗಳ ಪೈಕಿ ಕುಡುಪು ಕ್ಷೇತ್ರ ದೊಡ್ಡ ಹಿರಿಮೆಯನ್ನು ಕೊಟ್ಟಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಶಾಂತಾರಾಮ ಶೆಟ್ಟಿ ಮಾತನಾಡಿ, ವೈದ್ಯರು, ಶಿಕ್ಷಕರು, ವಕೀಲರು ಮಾಡುವ ಕೆಲಸದಲ್ಲಿ ದೇವರನ್ನು ಕಂಡರೆ ಅದು ಖಂಡಿತಾ ರಾಮರಾಜ್ಯವಾಗುತ್ತದೆ. ದೇವರಲ್ಲಿ ನಂಬಿಕೆ ಇಟ್ಟವ ಖಂಡಿತ ತಪ್ಪು ಮಾಡುವುದಿಲ್ಲ. ಬ್ರಹ್ಮಕಲಶ ಬಹಳ ವೈಭವದಿಂದ ನಡೆಯುತ್ತಿದೆ. ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಎಲ್ಲವೂ ಶಾಂತಯುತವಾಗಿ ನೆರವೇರಲಿ ಎಂದು ಶುಭಹಾರೈಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಕೆ.ಎಲ್. ಕುಂಡತ್ತಾಯ, ದೇವಸ್ಥಾನ ಎಂದರೆ ನಮ್ಮ ಸಂಸ್ಕøತಿ. ದೇವಸ್ಥಾನ ಒಬ್ಬನದಲ್ಲ, ದೇವಸ್ಥಾನ ಒಂದು ಸಮಾಜದ್ದೂ ಅಲ್ಲ, ಅದು ಸಮಷ್ಠಿಯ ಚಿಂತನೆಯದ್ದಾಗಿದೆ. ದೇವಸ್ಥಾನದ ಸಂಸ್ಕøತಿಗೆ ಸಮಷ್ಠಿಯ ಚಿಂತನೆ ಇದೆ ಎಂದರು.
ಸಮಾರಂಭದಲ್ಲಿ ಮೋಹನ್ ಅಮೀನ್, ಗಣೇಶ್ ಬಂಗೇರ, ಪ್ರಸಾದ್ ರಾಜ್ ಕಾಂಚನ್, ಆರೂರು ಪ್ರಭಾಕರ ರಾವ್, ಹರಿ ನಾರಾಯಣ ಅಸ್ರಣ್ಣ, ಮಹೇಶ್ ಮೂರ್ತಿ, ಭಾಸ್ಕರ ಕೆ., ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ನವೀನ್ ಕುಮಾರ್, ಸುಜನ್ ದಾಸ್ ಕುಡುಪು, ಜನಾರ್ದನ ಕುಡುಪು, ರವೀಂದ್ರ ನಾಯ್ಕ, ರವಿಪ್ರಸನ್ನ, ಮೊದಲಾದವರು ಉಪಸ್ಥಿತರಿದ್ದರು.
ವಾಸುದೇವರಾವ್ ಕುಡುಪು ಪ್ರಸ್ತಾವನೆಗೈದರು. ಶರತ್ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.