ಕುತಂತ್ರಕ್ಕೆ ಹೆದರುವ ಮಗ ನಾನಲ್ಲ, ತೊಂದರೆ ಕೊಡುವವರಿಗೆ ದೇವರು ಒಳ್ಳೆಯದು ಮಾಡಲಿ – ಡಿಕೆ ಶಿವಕುಮಾರ್
ಬೆಂಗಳೂರು: ಈ ಡಿಕೆ ಶಿವಕುಮಾರ್ ಕುತಂತ್ರಕ್ಕೆ ಹೆದರುವ ಮಗನಲ್ಲ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಸಿಬಿಐ ದಾಳಿ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಿಬಿಐ ದಾಳಿ ವೇಳೆ ತಮ್ಮನ್ನು ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
30 ವರ್ಷದ ರಾಜಕಾರಣದಲ್ಲಿ ಪಕ್ಷದ ಕಾರ್ಯಕರ್ತನಾಗಿ, ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ದಾಳಿ ಮೂಲಕ ನನ್ನ ಬಾಯಿ ಮುಚ್ಚಿಸಲು ಯತ್ನಿಸಿವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳುವವನಲ್ಲ. ಉಪಚುನಾವಣೆ ಮುಗಿಯುವವರೆಗೆ ಈ ದಾಳಿ ಮುಂದವರಿಯಲಿದೆ ಎಂದರು.
ಸಿಬಿಐ ಅಧಿಕಾರಿಗಳು ಮನೆಯಲ್ಲಿ ಸೀರೆ, ಪ್ಯಾಂಟು ಹೀಗೆ ಎಲ್ಲ ಲೆಕ್ಕ ತೆಗೆದುಕೊಂಡಿದ್ದಾರೆ. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ. ಸಿಭಿಐ ನವರಿಗೆ ವೃತ್ತಿಪರತೆ ಇದೆ ಇಡಿ ಅಧಿಕಾರಿಗಳು ಈ ರೀತಿ ಇಲ್ಲ ಎಂದು ಹೇಳಿದರು.
50 ಲಕ್ಷ ಸಿಕ್ಕಿದೆ ಎಂದು ವರದಿ ಬರುತ್ತಿದೆ. ನಾನು ತಲೆ ಕೆಡಿಸಿಕೊಳ್ಳಲು ಹೋಗಲ್ಲ. ದಾಳಿ ನಡೆಸಿದ ಅಧಿಕಾರಿಗಳು ಎಲ್ಲಾ ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ಪ್ಯಾಂಟ್, ಪಂಚೆ, ಸೀರೆ ಲೆಕ್ಕ ಹಾಕಿದ್ದಾರೆ. ನಾನು ತಪ್ಪು ಮಾಡಿಲ್ಲ, ರಾಜಕಾರಣದ ಕುತಂತ್ರಕ್ಕೆ ಬಗ್ಗಲ್ಲ, ಒತ್ತಡಕ್ಕೆ ಹೆದರಲ್ಲ ಎಂದು ವಿಶ್ವಾಸದ ಮಾತುಗಳನ್ನಾಡಿದ ಡಿಕೆಶಿ, ಭಕ್ತ ಉಂಟು ಭಗವಂತ ಉಂಟು ಎಂದರು.