ಕುದ್ಮುಲ್ ರಂಗರಾಯರ ಬದುಕೇ ನಮಗೆ ಪ್ರೇರಣೆ- ವೇದವ್ಯಾಸ ಕಾಮತ್
ಮಂಗಳೂರು: ದಲಿತನೊಬ್ಬ ಉನ್ನತ ವಿದ್ಯಾಭ್ಯಾಸ ಪಡೆದು, ಉತ್ತಮ ಕೆಲಸ ಗಿಟ್ಟಿಸಿಕೊಂಡು, ಅವನು ಕಾರಿನಲ್ಲಿ ಹೋಗುವಾಗ ಆ ಕಾರಿನಿಂದ ಎದ್ದ ಧೂಳು ತನ್ನ ಹಣೆಗೆ ತಾಗಿದರೆ ಅಂದು ತನ್ನ ಜನ್ಮ ಸಾರ್ಥಕ ಎಂದು ಹೇಳಿದ ಕುದ್ಮುಲ್ ರಂಗರಾಯರ ತತ್ವಾದರ್ಶಗಳು ನಮಗೆ ಎಂದಿಗೂ ಪ್ರೇರಣೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅವರು ಗುರುವಾರ ಕುದ್ಮುಲ್ ರಂಗರಾಯರ 158ನೇ ಜನ್ಮದಿನಾಚರಣೆಯಂದು ಮಂಗಳೂರಿನ ನಂದಿಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಂಗರಾಯರು ತಮ್ಮ ವಕೀಲ ವೃತ್ತಿಯ ಉನ್ನತಿಯ ದಿನಗಳಲ್ಲಿ ದಲಿತರ ಮೇಲಿನ ಪ್ರಕರಣಗಳಿಗೆ ಯಾವುದೇ ಫೀಸ್ ತೆಗೆದುಕೊಳ್ಳದೆ ಹೋರಾಡಿ ನ್ಯಾಯ ದೊರಕಿಸಿಕೊಡುತ್ತಿದ್ದರು. ದಲಿತ ಸಮಾಜದ ಎಷ್ಟೋ ಕಡು ಬಡ ವಿದ್ಯಾರ್ಥಿಗಳ ಕಲಿಕೆಗೆ, ಉದ್ಯೋಗಕ್ಕೆ, ಕಷ್ಟ ಕಾರ್ಫಣ್ಯಗಳಿಗೆ ಶೀಘ್ರದಲ್ಲಿ ಸ್ಪಂದಿಸುವ ಮೂಲಕ ಆದರ್ಶಪ್ರಾಯರಾದರು. ದಲಿತರಿಗೆ ಬದುಕುವ ಹಕ್ಕು, ಶಿಕ್ಷಣದ ಹಕ್ಕು, ವಾಸಿಸುವ ಹಕ್ಕು, ಉದ್ಯೋಗದ ಹಕ್ಕು ನೀಡಲು ಶ್ರಮಿಸಿದ ರಂಗರಾಯರನ್ನು ಈ ವಿಷಯದಲ್ಲಿ ಮಹಾತ್ಮಾ ಗಾಂಧಿಯವರೇ ತಮ್ಮ ಗುರು ಎಂದು ಒಪ್ಪಿದ್ದು ರಂಗರಾಯರಿಗೆ ಸಿಕ್ಕಿದ ರಾಷ್ಟ್ರೀಯ ಮನ್ನಣೆ. ದೂರದೂರಿನಿಂದ ಬರುವ ಹೆಣ್ಣುಮಕ್ಕಳಿಗೆ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿ ನಿಲಯ ಸ್ಥಾಪಿಸಿದ ರಂಗರಾಯರ ದೂರದೃಷ್ಟಿ ಅವಿಸ್ಮರಣೀಯ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ದಕ ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಸಂಜಯ್ ಪ್ರಭು, ಶ್ರೀನಾಥ್ ಮಾನೆ ಉಪಸ್ಥಿತರಿದ್ದರು.