ಕುದ್ರೋಳಿ ಸ್ಮಾರ್ಟ್ ಕಸಾಯಿ ಖಾನೆ ನಿರ್ಮಾಣ ಕೈ ಬಿಡುವಂತೆ ವಿಎಚ್ ಪಿ, ಬಜರಂಗದಳ ಆಗ್ರಹ
ಮಂಗಳೂರು : ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಕುದ್ರೋಳಿಯಲ್ಲಿ ಶಾಶ್ವತವಾಗಿ ಪುನರ್ ರಚಿಸುವುದನ್ನು ಪ್ರತಿಭಟಿಸಿ ಹಾಗೂ ಸ್ಮಾರ್ಟ್ ಸಿಟಿಯ ಯೋಜನೆಯಿಂದ ಕಸಾಯಿಖಾನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಮಂಗಳೂರು ಮಹಾನಗರ ಪಾಲಿಕೆಯ ಎದುರು ಅಕ್ಟೋಬರ್ 12 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಜಂಟಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಜಂಟಿ ಮಾಧ್ಯಮ ಹೇಳಿಕೆ ನೀಡಿರುವ ವಿಎಚ್ ಪಿ ಮಂಗಳೂರು ಅಧ್ಯಕ್ಷ ಜಗದೀಶ್ ಶೇಣವ ಮತ್ತು ಬಜರಂಗದಳ ಸಂಚಾಲಕ ಪ್ರವೀಣ್ ಕುತ್ತಾರ್ ಅವರು ಮಂಗಳೂರು ಮಹಾನಗರಪಾಲಿಕೆಯ ಒಡೆತನದಲ್ಲಿರುವ ಕುದ್ರೋಳಿ ಕಸಾಯಿ ಖಾನೆ ಹಾಗೂ ಅದರ ಆಸುಪಾಸಿನಲ್ಲಿರುವ ಅನಧೀಕೃತ ಅಕ್ರಮ ಕಸಾಯಿ ಖಾನೆಗಳು ಸದಾ ಗೋವಧೆಯ ಕೇಂದ್ರಗಳಾಗಿದ್ದು ಕೋಮುಭಾವನೆ ಕೆರಳಿಸುವ ಕೆಲಸಗಳನ್ನು ಮಾಡುತ್ತಿದೆ. ಕುದ್ರೋಳಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವ ಗೋಸಾಗಾಟದ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಹಲವಾರು ಬಾರಿ ಕುದ್ರೋಳಿ ಕಸಾಯಿ ಖಾನೆಗೆ ವಧಿಸಲು ಕೊಂಡು ಹೋಗುತ್ತಿದ್ದುದಾಗಿ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಗೋ ವಧೆ ಸಂಪೂರ್ಣ ನಿಷೇಧವಿದ್ದು ಹಿಂದೂ ಭಾವನೆಗೆ ಧಕ್ಕೆ ತರುವಂತಹ ರೀತಿಯಲ್ಲಿ ಈ ವಧಾಗೃಹಗಳಲ್ಲಿ ಗೋವಧೆಯಾಗುತ್ತಿದೆ.
ಇಂತಹ ಅಕ್ರಮ ಹಾಗೂ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಆಧುನಿಕ ಕಸಾಯಿ ಖಾನೆಯನ್ನು 15 ಕೋಟಿ ರೂಪಾಯಿಯಲ್ಲಿ ಸ್ಮಾರ್ಟ್ ಕಸಾಯಿ ಖಾನೆ ಮಾಡಲು ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ತಯಾರಿ ನಡೆಸುತ್ತಿರುವುದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಈ ಸ್ಮಾರ್ಟ್ ಕಸಾಯಿ ಖಾನೆಗೆ ಸಚಿವ ಖಾದರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದಾರೆ. ಹಿಂದೂಗಳಿಗೆ ಪೂಜನೀಯವಾಗಿರುವ ಗೋ ಮಾತೆಯನ್ನು ರಕ್ಷಿಸುವ ಬದಲು ಹಾಗೂ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಪರೋಕ್ಷವಾಗಿ ಗೋ ಹತ್ಯೆಗೆ ಬೆಂಬಲ ನೀಡುತ್ತಿರುವ ಈ ಹಿಂದೂ ವಿರೋಧಿ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸುತ್ತಾ ಇಲ್ಲಿ ಸ್ಮಾರ್ಟ್ ಕಸಾಯಿ ಖಾನೆ ಬೇಡವೇ ಬೇಡ ಎಂದು ಸರಕಾರಕ್ಕೆ ಆಗ್ರಹಿಸಿವೆ.
ಹಿಂದಿನ ಬಾರಿ ಖಾದರ್ ಅವರು ಸಚಿವರಾದ ತಕ್ಷಣ ತಲಪಾಡಿಯಲ್ಲಿ ಗೋಕಳ್ಳರು ಗೋವನ್ನು ಕದ್ದು ತುಳಸಿಕಟ್ಟೆಯ ಮೇಲೆ ಗೋವಿನ ಕಾಲುಗಳನ್ನಿಟ್ಟ ಹೀನ ಕೃತ್ಯ ನಡೆದಿರುವುದು ಸಚಿವ ಖಾದರ್ ಅವರ ಕ್ಷೇತ್ರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿರುವುದು, ಉಳ್ಳಾಲ ಚೆಂಬುಗುಡ್ಡೆ, ಒಳಪೇಟೆ, ಮುಕ್ಕಚೇರಿ ಮುಂತಾದೆಡೆ ಗೋಹತ್ಯೆ ಹೆಚ್ಚಾದುದು ಸಚಿವ ಖಾದರ್ ಅವರ ಕ್ಷೇತ್ರದಲ್ಲಿ ಹಿಂದೂ ವಿರೋಧೀ ಆಡಳಿತಕ್ಕೆ ಸಾಕ್ಷಿಯಾಗಿದೆ. ಈಗ ಉಸ್ತುವಾರಿ ಸಚಿವರಾದ ತಕ್ಷಣ ಮತ್ತೆ ಕುದ್ರೋಳಿ ಕಸಾಯಿಖಾನೆಗೆ ರೂ 15ಕೋಟಿ ರೂಪಾಯಿ ಕೊಟ್ಟು ಗೋಹಂತಕರಿಗೆ ಪರೋಕ್ಷ ಬೆಂಬಲ ಕೊಡುತ್ತಿರುವುದುನ್ನು ತಕ್ಕಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಲಿನ್ಯ ಮಾಡುತ್ತಿದೆ ಎಂಬ ಕಾರಣಕ್ಕೆ ಹಿಂದೊಮ್ಮೆ ಇದೇ ಕುದ್ರೋಳಿ ಕಸಾಯಿಖಾನೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಚ್ಚಿತ್ತು. ಕೆಲವ ಸಮಯದ ನಂತರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ವಧಾಗೃಹವನ್ನು ಕುದ್ರೋಳಿಯಿಂದ ನಗರದ ಹೊರಪ್ರದೇಶಕ್ಕೆ ಸ್ಥಳಾಂತರಿಸುವೆ ಎಂದು ಅಫಿದಾವಿತ್ ಮೂಲಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೊಟ್ಟದ್ದರಿಂದ ಆಗ ಕೂಡ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಸರಕಾರವು ಕೇವಲ ಎರಡು ವರ್ಷಗಳಿಗಾಗಿ ಪುನರಾರಂಬಿಸಲು ಆಧೇಶಿಸಿತಾದರೂ ಇದುವರೆಗೂ ಅದನ್ನು ಸ್ಥಳಾಂತರಿಸಿಲ್ಲ. ಈ ಹಿಂದೆ ಕಸಾಯಿ ಖಾನೆಯ ಆಸುಪಾಸಿನವರು ವಾಯುಮಾಲಿನ್ಯದ ಬಗ್ಗೆ ಪದೇ ಪದೇ ದೂರನ್ನು ಕೊಟ್ಟಿರುತ್ತಾರೆ. ಈ ರೂ. 15 ಕೋಟಿ ಜನರ ಹಣವನ್ನು ಉಪಯೋಗಿಸಿದರೆ ಮುಂದೆ ಒಂದಲ್ಲ ಒಂದು ದಿನ ಕೋರ್ಟ್ ಆದೇಶದಂತೆ ಮುಚ್ಚಬೇಕಾಗಿ ಬಂದಾಗ ಜನರ ತೆರಿಗೆ ಹಣಸಂಪೂರ್ಣ ವ್ಯರ್ಥವಾಗುತ್ತದೆ ಆದ್ದರಿಂದ ನಗರಕ್ಕೆ ಕ್ಯಾನ್ಸರ್ ರೀತಿಯಲ್ಲಿರುವ ಕುದ್ರೋಳಿ ಕಸಾಯಿ ಖಾನೆಯನ್ನು ತಕ್ಷಣ ಮುಚ್ಚುವಂತೆ ಪಾಲಿಕೆ ಮತ್ತು ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.