ಕುಮಾರಸ್ವಾಮಿಗೆ ಮಹಿಳೆಯರಿಂದ ತಕ್ಕ ಉತ್ತರ: ಶಾಲೆಟ್‌ ಪಿಂಟೊ

Spread the love

ಕುಮಾರಸ್ವಾಮಿಗೆ ಮಹಿಳೆಯರಿಂದ ತಕ್ಕ ಉತ್ತರ: ಶಾಲೆಟ್‌ ಪಿಂಟೊ
 

ಮಂಗಳೂರು: ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಮಕ್ಕಳು ಸ್ವಲ್ಪ ದಾರಿ ತಪ್ಪಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಯಾವ ಮಹಿಳೆ ದಾರಿ ತಪ್ಪಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸದಿದ್ದರೆ ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು.


ಇಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರ ಹೇಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಯಾಚಿಸದಿದ್ದರೆ ಅವರು ಪ್ರಚಾರಕ್ಕೆ ಹೋದಲ್ಲೆಲ್ಲ ಮಹಿಳೆಯರು ಪ್ರತಿಭಟಿಸಲಿದ್ದಾರೆ’ ಎಂದರು.

‘ಮಹಿಳೆಯರು ಎಷ್ಟು ಕಷ್ಟದಿಂದ ಕುಟುಂಬವನ್ನು ಸಂಭಾಳಿಸುತ್ತಾರೆ ಎಂದು ರೇಂಜ್‌ ರೋವರ್‌ ಕಾರಿನಲ್ಲಿ ತಿರುಗುವ, ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಕುಮಾರಸ್ವಾಮಿ ಅವರಿಗೇನು ಗೊತ್ತು. ದಾರಿ ತಪ್ಪಿರುವುದು ಎರಡೆರಡು ಕಡೆ ಮನೆ ಮಾಡಿರುವ ಕುಮಾರಸ್ವಾಮಿ ಅವರೇ ಹೊರತು, ಮಹಿಳೆಯರಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಲು ಸಾಧ್ಯವಾಗದ್ದನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮಾಡಿ ತೊರಿಸಿದೆ ಎಂಬ ಹೊಟ್ಟೆಕಿಚ್ಚು ಅವರಿಗೆ’ ಎಂದರು.

‘ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ಅವರು ಸರಿಯಾಗಿ ಗ್ರಾಮವಾಸ್ತ್ರವ್ಯ ಮಾಡಿದ್ದರೆ, ಗ್ರಾಮೀಣ ಮಹಿಳೆಯರ ಕಷ್ಟಗಳೇನು ಎಂಬುದರ ಅರಿವು ಅವರಿಗೆ ಇರುತ್ತಿತ್ತು. ಅವರು ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ‘ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದ ಮಹಿಳೆಯರನ್ನು ಅಪಮಾನ ಮಾಡುವವರು ಯಾರೂ ಫಲಾನುಭವಿಗಳ ಜತೆ ಮಾತನಾಡಿಲ್ಲ. ಮಹಿಳೆ ಅಬಲೆಯಾಗಿಯೇ ಮುಂದುವರಿಯಬೇಕೆಂಬ ಮನಸ್ಥಿತಿ ಅವರದು’ ಎಂದರು.

‘ಗೃಹಲಕ್ಷ್ಮಿ ಯೋಜನೆಯ ಹಣ ಸದುಪಯೋಗವಾಗಿದೆ. ಚುನಾವಣಾ ಪ್ರಚಾರಕ್ಕೆ ಹೋದಾಗ ಅನೇಕ ಮಹಿಳೆಯರು ಈ ಯೋಜನೆ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದರಿಂದ ಬಂದ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ನೀರು ತುಂಬಿಸಲು ಸಿಂಟೆಕ್ಸ್‌ ಖರೀದಿಸಿದ್ದಾರೆ. ಇನ್ನೊಬ್ಬ ಮಹಿಳೆಯು ಮಗಳಿಗೆ ಬೆಂಡೋಲೆ ಮಾಡಿಸಿದ್ದಾರೆ. ಮತ್ತೊಬ್ಬರು ಮನೆಗೆ ಫ್ರಿಜ್‌ ಖರೀದಿಸಿದ್ದಾರೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಈ ಸಲ ಖಂಡಿತಾ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ಬಿಜೆಪಿಯ ಮಹಿಳೆಯರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಮುಖಂಡರ ಮನೆಯ ಮಹಿಳೆಯರ ಮತಗಳೂ ಈ ಸಲ ಕಾಂಗ್ರೆಸ್‌ ಅಭ್ಯರ್ಥಿಗೆ ಬೀಳಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕಲಾ ಡಿ.ರಾವ್‌, ಸುರೇಖಾ ಚಂದ್ರಹಾಸ್‌, ಸದಸ್ಯೆ ಗೀತಾ ಅತ್ತಾವರ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸಾರಿಕಾ ಪೂಜಾರಿ, ಪಾಲಿಕೆ ಸದಸ್ಯೆ ತನ್ವೀರ್‌ ಷಾ, ಕಾಂಗ್ರೆಸ್‌ ನಗರ ಬ್ಲಾಕ್‌ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಚೇತನ್‌ ಭಾಗವಹಿಸಿದ್ದರು.


Spread the love