ಕುಲಶೇಖರ – ಕಣ್ಣಗುಡ್ಡೆ ಜನರ ಬಹು ದಿನದ ಕನಸು ಇಂದು ನನಸಾಗಿದೆ – ಶಾಸಕ ಜೆ.ಆರ್ ಲೋಬೊ
ಮಂಗಳೂರು : ರೈಲ್ವೆ ಇಲಾಖೆಗೆ ಸುಮಾರು 1.32 ಕೋಟಿ ಪಾವತಿಸಿ ಅನುಮತಿಯನ್ನು ಪಡೆದು ಹಾಗೂ ಸುಮಾರು 85 ಲಕ್ಷ ವೆಚ್ಚದಲ್ಲಿ ಕುಲಶೇಖರ ಕನ್ನಗುಡ್ಡೆಯ ಹೊಸ ರಸ್ತೆಯ ಗುದ್ದಲಿಪೂಜೆಯನ್ನು ಶಾಸಕರಾದ ಜೆ.ಆರ್.ಲೋಬೊ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಾನು ವರ್ಷಗಳ ಹಿಂದೆ ಈ ಭಾಗಕ್ಕೆ ಮತಯಾಚನೆಯ ಸಂದರ್ಭದಲ್ಲಿ ಬೇಟಿ ನೀಡಿದಾಗ ಈ ಭಾಗದ ಜನರು ತಾವು 40 ವರ್ಷಗಳಿಂದ ಅನುಭವಿಸಿ ಬಂದಿರುವಂತಹ ಧೂಳಿನ ರಸ್ತೆಯ ವಿಚಾರವನ್ನು ನನ್ನ ಗಮನಕ್ಕೆ ತಂದು ಇದರಿಂದ ಮುಕ್ತಿ ದೊರಕಿಸಿ ರೈಲ್ವೆ ಇಲಾಖೆಯಿಂದ ಪರವಾನಿಗೆ ಹಾಗೂ ಹೊಸ ರಸ್ತೆ ನಿರ್ಮಾಣದ ಬೇಡಿಕೆಯನ್ನು ನನ್ನ ಮುಂದಿಟ್ಟಿದ್ದರು. ನಾನು ಈ ರಸ್ತೆಯ ಬೇಡಿಕೆಯನ್ನು ಪೂರೈಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದೆ. ಆದರೆ ಈ ಕೆಲಸ ಇಷ್ಟು ಕಷ್ಟವೆಂದು ಆ ಸಮಯದಲ್ಲಿ ನನಗೆ ತಿಳಿದಿರಲಿಲ್ಲ. ಕಳೆದ ನಾಲ್ಕುವರೆ ವರ್ಷದ ಸತತ ಪ್ರಯತ್ನದಿಂದ ರೈಲ್ವೆ ಇಲಾಖೆಯ ಪಾಲ್ಗಾಟ್ ವಿಭಾಗ, ಚೆನೈ ವಲಯ, ದೆಹಲಿಯ ರೈಲ್ವೆ ಬೋರ್ಡ್ ಅಧಿಕಾರಿಗಳ ಜೊತೆ ನಡೆಸಿದ ನಿರಂತರ ಪ್ರಕ್ರಿಯೆಯ ಮುಖಾಂತರ ಇಂದು ರೈಲ್ವೆ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆತಿದೆ.
ಈಗಾಗಲೇ ರೈಲ್ವೆ ಇಲಾಖೆಯ ಬೇಡಿಕೆಯಂತೆ ಸುಮಾರು 1.32 ಕೋಟಿ ರೂಗಳನ್ನು ಮಂಗಳೂರು ನಗರ ಪಾಲಿಕೆಯಿಂದ ರೈಲ್ವೆ ಇಲಾಖೆಗೆ ಪಾವತಿಸಲಾಗಿದೆ. ಹಾಗೂ ಸುಮಾರು 85 ಲಕ್ಷ ರೂಗಳನ್ನು ಹೊಸ ರಸ್ತೆ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಇದಲ್ಲದೇ ಈ ರಸ್ತೆಯು ಇನ್ನು ಮುಂದಕ್ಕೆ ಉಮಿಕಾನ್, ಕಣ್ಣಗುಡ್ಡೆ, ನೂಜಿ ಕರ್ಪಿಮಾರ್ ಮಾರ್ಗವಾಗಿ ಕೊಡೆಕ್ಕಲ್ ಮೂಲಕ ಕಣ್ಣೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ರಾಜ್ಯ ಸರಕಾರದಿಂದ 10.5 ಕೋಟಿ ಅನುದಾನ ಬಿಡುಗಡೆ ಹೊಂದಿದ್ದು, ಈ ಕೆಲಸವು ಶೀಘ್ರವಾಗಿ ಆರಂಭವಾಗಲಿದೆ. ಇದರ ನಡುವೆ ಕೊಡೆಕ್ಕಲ್ ಬಳಿ ರೈಲ್ವೆ ಕೆಳ ಸೇತುವೆ ನಿರ್ಮಾಣದ ಅಗತ್ಯವಿದ್ದು ಇದಕ್ಕೆ ಬೇಕಾಗುವ ಅನುಮತಿ ಹಾಗೂ ಮೊತ್ತವನ್ನು ಶೀಘ್ರವಾಗಿ ದೊರಕುವಂತೆ ಪ್ರಯತ್ನ ಮಾಡಲಾಗುವುದು. ಕುಲಶೇಖರದಿಂದ ಕಣ್ಣಗುಡ್ಡೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದಲ್ಲಿ ಬೆಂಗಳೂರಿನಿಂದ ಮೂಡಬಿದ್ರೆ ಕಾರ್ಕಳಕ್ಕೆ ಪ್ರಯಾಣಿಸುವ ಹಾಗೂ ವಾಮಂಜೂರು, ಕುಡುಪು, ಬೈತುರ್ಲಿ, ಕುಲಶೇಖರ ಹಾಗೂ ಶಕ್ತಿನಗರದ ಜನರಿಗೆ ಬಿ.ಸಿ.ರೋಡ್ ಬಂಟ್ವಾಳಕ್ಕೆ ತಲುಪಲು ಬಹಳಷ್ಟು ಸಮಯದ ಅಂತರವನ್ನು ಈ ರಸ್ತೆ ಕಡಿಮೆಗೊಳಿಸಲಿದೆ. ಅದಲ್ಲದೇ ಸುಮಾರು 2000ಕ್ಕೂ ಅಧಿಕ ಜನರಿಗೆ ಈ ರಸ್ತೆಯು ಉಪಯೋಗವಾಗಲಿದ್ದು, ದ್ವೀಪದಂತಿರುವ ಈ ಒಳ ಪ್ರದೇಶ ಅಭಿವೃದ್ಧಿಗಾಗಿ ತೆರೆದುಕೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್, ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ನಾಗವೇಣಿ ಹಾಗೂ ಕಾರ್ಪೋರೇಟರ್ ಗಳಾದ ಭಾಸ್ಕರ್.ಕೆ, ಬಿ.ಪ್ರಕಾಶ್, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಕೇಶವ ಮರೋಳಿ, ಮ.ನ.ಪಾ ಆಯುಕ್ತರಾದ ಮಹಮ್ಮದ್ ನಝೀರ್, ಬ್ಲಾಕ್ ಅಧ್ಯಕ್ಷರಾದ ಶ್ರೀ. ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸಲೀಂ ಹಾಗೂ ಪ್ರಭಾಕರ್ ಶ್ರೀಯಾನ್, ವಾರ್ಡ್ ಅಧ್ಯಕ್ಷ ಡೆನ್ನಿಸ್ ಡಿಸಿಲ್ವ, ಹೆನ್ರಿ ಡಿಸೋಜ, ಉಮೇಶ್ ನೂಜಿ, ರಿತೇಶ್, ನವೀನ್ ಕಂಡೇವು, ಆಲ್ವಿನ್ ಪಾಯಿಸ್, ಟಿ.ಕೆ ಸುಧೀರ್, ಮರಿಯಮ್ಮ ತೋಮಸ್, ರಮಾನಂದ ಪೂಜಾರಿ, ನೆಲ್ಸನ್ ಮೊಂತೆರೋ, ಅಧಿಕಾರಿಗಳಾದ ಲಿಂಗೇಗೌಡ, ಗಣಪತಿ, ಲಕ್ಷ್ಮಣ್ ಪೂಜಾರಿ, ಗುತ್ತಿಗೆದಾರ ಎಮ್. ಜಿ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಭಾಸ್ಕರ್.ಕೆ ಪ್ರಕಾಶ್ ಹಾಗೂ ಕಣ್ಣಗುಡ್ಡೆ ಪ್ರದೇಶದ ನಾಗರಿಕರು ಶಾಸಕರನ್ನು ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು.