ಕುವೈತ್ ತೆರಳಿದ ಮಂಗಳೂರಿನ 35 ಯುವಕರು ಅತಂತ್ರ, ಸಹಾಯಕ್ಕಾಗಿ ಮನವಿ – ಸ್ಪಂದಿಸಿದ ಶಾಸಕ ಕಾಮತ್
ಮಂಗಳೂರು: ಉದ್ಯೋಗ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕುವೈಟ್ಗೆ ತೆರಳಿದ್ದ 35 ಯುವಕರು ಅತಂತ್ರರಾಗಿದ್ದು, ತಮಗೆ ಸಹಾಯ ಮಾಡುವಂತೆ ಶಾಸಕರು, ನಾಗರಿಕರಲ್ಲಿ ಮನವಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಯುವಕರು ಕುವೈತ್ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
‘ನಗರದ ಮಾಣಿಕ್ಯ ಎಸೋಸಿಯೇಟ್ಸ್ ಪ್ಲೇಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲೀಕ ಪ್ರಸಾದ್ ಶೆಟ್ಟಿ ಎಂಬವರಿಗೆ 65 ಸಾವಿರ ರೂ.ಹಣವನ್ನು ನೀಡಿ ಜ.7ರಂದು ಕುವೈತ್ಗೆ ಬಂದಿದ್ದೇವೆ. ಆತನ ಇಲ್ಲಿ ಬಂದ ಬಳಿಕ ಅತಂತ್ರರಾಗಿದ್ದೇವೆ ಎಂದು ಹೇಳಿದ್ದಾರೆ.
ಮಂಗಳೂರಿನಿಂದ ಬರುವಾಗ ಕುವೈಟ್ನ ಕ್ಯಾಂಬ್ರಿಡ್ಜ್ ಎನ್ನುವ ಕಂಪನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕುವೈಟ್ಗೆ ಬಂದ ಬಳಿಕ ಬೇರೆ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾರೆ. ಆ ಕಂಪನಿಯಲ್ಲಿ 5 ತಿಂಗಳಿನಿಂದ ದುಡಿಯುತ್ತಿದ್ದು, ಈತನಕ ಬಿಡಿಕಾಸು ಸಂಬಳವನ್ನೂ ನೀಡಿಲ್ಲ. ಇದರಿಂದ ನಾವು ತೀರಾ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಇದು ಮಾತ್ರವಲ್ಲದೆ ಈಗ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದ್ದು, ಆಹಾರಕ್ಕಾಗಿ ನಾವು ಇಲ್ಲಿ ಭಿಕ್ಷೆ ಬೇಡು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವಕರು ಅಲವತ್ತುಕೊಂಡಿದ್ದಾರೆ.
ನಾವು ಸಂಕಷ್ಟಕ್ಕೆ ಸಿಲುಕಿದ ಬಳಿಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಿದ್ದು, ಅಲ್ಲಿಂದ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ್ಲ. ನಾವು ಬಡವರಾಗಿದ್ದು, ಮಂಗಳೂರಿನ ಮಾಧ್ಯಮದವರು, ರಾಜಕೀಯ ಪ್ರತಿನಿಧಿಗಳು, ಶಾಸಕ ವೇದವ್ಯಾಸ ಕಾಮತ್ ಸಹಾಯ ಮಾಡಬೇಕು. ನಾವು ಮರಳಿಗೆ ಊರಿಗೆ ಬರಲು ನಿರ್ಧರಿಸಿದ್ದು, ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎಂದು ಸಹಾಯ ಕೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರಿನ 35 ಮಂದಿ ಕುವೈತ್ಗೆ ಉದ್ಯೋಗಕ್ಕೆಂದು ಹೋಗಿ ಸಂಕಷ್ಟದಲ್ಲಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ವಿಡಿಯೋ ವೀಕ್ಷಣೆ ಮಾಡಿದ್ದು, ಆ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅವರ ವಿಳಾಸ ಪತ್ತೆಗೆ ಪ್ರಯತ್ನ ಮಾಡಲು ಮಂಗಳೂರಿನವರಾದ ಪ್ರಸ್ತುತ ಕುವೈತ್ ನಲ್ಲಿರುವ ರಾಜ್ ಭಂಡಾರಿಯವರಿಗೆ ಸೂಚಿಸಿದ್ದು, ಅವರನ್ನು ಉದ್ಯೋಗಕ್ಕೆ ಕಳುಹಿಸಿದ ಸಂಸ್ಥೆಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಯುವಕರ ಪಾಸ್ಪೋರ್ಟ್, ವಿಳಾಸ ವಿವರ ಸಿಕ್ಕಿದ ಕೂಡಲೇ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಯುವಕರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.