ಬಳ್ಳಾರಿ: ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ಕರೆ ಸ್ವೀಕರಿಸಲಿಲ್ಲ ಎಂದು ಇಂಡಿಗೆ ವರ್ಗಾವಣೆಗೊಂಡು ಜನರ ಆಕ್ರೋಶದ ಬಳಿಕ ಮತ್ತೆ ಕೂಡ್ಲಿಗಿಗೆ ಮರು ನಿಯೋಜನೆಗೊಂಡು ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ಶನಿವಾರ ಧಿಡೀರ್ ರಾಜೀನಾಮೆ ನೀಡಿದ ಕುರಿತು ವರದಿಯಾಗಿದೆ.
ಅನುಪಮಾ ಅವರು ಬೆಳಿಗ್ಗೆ ಇನ್‌ಸ್ಪೆಕ್ಟರ್ ನಾಗಪ್ಪ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ, ರಜೆ ಮೇಲೆ ತೆರಳಿದ್ದಾರೆ ಎಂದು ಬಳ್ಳಾರಿ ಎಸ್ಪಿ ಆರ್. ಚೇತನ್ ಸ್ಪಷ್ಟನೆ ನೀಡಿದ್ದಾರೆ. ಅನುಪಮಾ ಅವರ ರಾಜೀನಾಮೆಗೆ ನಿಜವಾದ ಕಾರಣ ಏನೆಂಬುದು ಗೊತ್ತಾಗಿಲ್ಲವಾದರೂ ಮಾಹಿತಿಗಳ ಪ್ರಕಾರ ಕೂಡ್ಲಿಗಿಯ ಅಂಬೇಡ್ಕರ್ ಭವನದ ಬಳಿ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರು ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡುತ್ತಿದ್ದರು.ಇದರ ವಿರುದ್ದ ದಲಿತ ಸಂಘಟನೆಗಳು ಅನುಪಮಾ ಅವರಿಗೆ ದೂರು ನೀಡಿದ್ದರು . ಹೀಗಾಗಿ ಅಲ್ಲಿ ಕಾಮಗಾಗಿ ನಡೆಸದಂತೆ ಅನುಪಮಾ ಖಡಕ್ ಸೂಚನೆ ನೀಡಿದ್ದರು ಎನ್ನಲಾಗಿದೆ.
ಸೂಚನೆ ಮೇಲೆಯೂ ಕಾಮಗಾರಿ ಮುಂದುವರಿಸಿದ ಕಾರಣ ಮೂವರನ್ನು ಅನುಪಮಾ ಬಂಧಿಸಿದ್ದರು. ಬಂಧನದ ಬಳಿಕ ಕಾಂಗ್ರೆಸ್ ಮುಖಂಡನ ಬೆಂಬಲಿಗರು ಠಾಣೆಯ ಮುಂದೆ ಅನುಪಮಾ ಅವರ ವಿರುದ್ದ ಪ್ರತಿಭಟನೆಯನ್ನೂ ನಡೆಸಿದ್ದರು. ಹೀಗಾಗಿ ಮನನೊಂದು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿಂದೆ ಚಿವ ಪರಮೇಶ್ವರ ನಾಯ್ಕ್ ಅವರ ಫೋನ್ ಕರೆ ಸ್ವೀಕರಿಸಲಿಲ್ಲ ಎನ್ನುವ ಕಾರಣಕ್ಕೆ ಶೆಣೈ ಅವರನ್ನು ಜ. 19ರಂದು ಅಥಣಿಗೆ ವರ್ಗಾವಣೆ ಮಾಡಿದ್ದ ಸರ್ಕಾರ ಮಾರನೇ ದಿನವೇ ಇಂಡಿಗೆ ವರ್ಗಾವಣೆ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರೇ ಈ ವರ್ಗಾವಣೆ ಮಾಡಿಸಿದ್ದಾರೆ ಎಂಬ ವದಂತಿ ಜಿಲ್ಲೆಯಾದ್ಯಂತ ಹಬ್ಬಿ ತೀವ್ರ ಚರ್ಚೆಗೆ ಕಾರಣವಾಗಿ, ಸಚಿವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.