ಕೃಷಿಗದ್ದೆಗಳು ಸರ್ವನಾಶ… ಪುನರ್ವಸು ಯಾಕೀ ಮುನಿಸು..!

Spread the love

ಕೃಷಿಗದ್ದೆಗಳು ಸರ್ವನಾಶ… ಪುನರ್ವಸು ಯಾಕೀ ಮುನಿಸು..!

  • ಎರಡೇ ವಾರದಲ್ಲಿ ಎರಡನೇ ಬಾರಿಗೆ ನೆರೆ!
  • ನದಿ ತೀರದ ಜನರಲ್ಲಿ ಮತ್ತಷ್ಟು ಆತಂಕ. ತುಂಬಿ ಹರಿಯುತ್ತಿರುವ ವಾರಾಹಿ, ಸೌಪರ್ಣಿಕ.

ಕುಂದಾಪುರ: ಆರಂಭದಿಂದಲೂ ಬಿಟ್ಟುಬಿಡದೇ ಸುರಿದ ಪುನರ್ವಸು ಮಳೆ ಮತ್ತೆ ಬಿರುಸು ಪಡೆದುಕೊಂಡಿದ್ದು, ಸೌಪರ್ಣಿಕಾ ನದಿ ತೀರದ ಪ್ರದೇಶಗಳು ಮತ್ತೆ ನೆರೆ ನೀರಿನಿಂದಾವೃತಗೊಂಡು ಜನರಲ್ಲಿ ಮತ್ತಷ್ಟು ಆತಂಕವನ್ನುಂಟುಮಾಡಿದೆ.

ಪಶ್ಚಿಮಘಟ್ಟದ ಸೆರಗಿನಲ್ಲಿ ನಿರಂತರ ಮಳೆಯಾಗುತ್ತಿರುದರಿಂದ ಸೌಪರ್ಣಿಕಾ ನದಿತೀರದ ಪ್ರದೇಶಗಳಾದ ನಾವುಂದ, ನಾಡ, ಮರವಂತೆ, ಪಡುಕೋಣೆ, ಹಡವು ಗ್ರಾಮಗಳು ಜಲಾವೃತಗೊಂಡಿವೆ. ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ, ಕೆಳಾಬದಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗಿನ ಜಾವ 3 ಗಂಟೆಗೆ ನೆರೆ ನೀರು ನುಗ್ಗಿದೆ. ಇದು ಈ ಭಾಗದಲ್ಲಿ ಈ ಬಾರಿಯ ಎರಡನೇ ನೆರೆಯಾಗಿದೆ. ಕಳೆದ 10 ದಿನಗಳ ಹಿಂದೆಯೂ ಇಲ್ಲಿ ನೆರೆ ಆವರಿಸಿ ಬಳಿಕ ಸ್ವಲ್ಪಮಟ್ಟಿಗೆ ಇಳಿಮುಖಗೊಂಡಿದ್ದರೂ ಗದ್ದೆಗಳಲ್ಲಿ ನೀರು ಇನ್ನೂ ಪೂರ್ಣವಾಗಿ ಇಳಿದಿರಲಿಲ್ಲ. ಅಷ್ಟರಲ್ಲೇ ಮತ್ತೊಂದು ನೆರೆ ಬಂದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಜಲದಿಗ್ಬಂಧನ:
ಸಾಲ್ಬುಡ, ಅರೆಹೊಳೆ, ಮರವಂತೆ-ಪಡುಕೋಣೆ ಸಂಪರ್ಕ ರಸ್ತೆಯೇ ಸಂಪೂರ್ಣ ಮುಳುಗಡೆಯಾಗಿದ್ದು, ಜನ ಅಗತ್ಯದ ವಸ್ತುಗಳ ಖರೀದಿಗೆ, ಪೇಟೆಗೆ ಬರಲು ದೋಣಿಯನ್ನೇ ಆಶ್ರಯಿಸಬೇಕಾಯಿತು. ಸಾಲ್ಬುಡ ಭಾಗದಲ್ಲಿ 30 ಮನೆಗಳಿದ್ದು, ಅರೆಹೊಳೆ ಪ್ರದೇಶದಲ್ಲಿ 70 ಕ್ಕೂ ಮಿಕ್ಕಿ ಮನೆಗಳಿವೆ. ನೆರೆ ಬಂದು ಅಂಗಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಬಾವಿ ನೀರೆಲ್ಲ ಕೊಳಕಾಗಿದೆ. ಇಲ್ಲಿನ ಬಹುತೇಕ ಮನೆಗಳ ಶೌಚಾಲಯಗಳಿಗೂ ನೀರು ನುಗ್ಗಿ ಸಮಸ್ಯೆಯಾಗಿದೆ. ಸೌಪರ್ಣಿಕಾ ನದಿ ತೀರದ ನಾಡ ಗ್ರಾಮದ ಚಿಕ್ಕಳ್ಳಿ, ಕುದ್ರು, ಬಡಾಕೆರೆ, ಪಡುಕೋಣೆ, ಮರವಂತೆ, ಕುರು ಕುದ್ರು ಭಾಗದಲ್ಲೂ ನೆರೆ ಬಂದಿದ್ದು, ಗದ್ದೆಗಳು ಜಲಾವೃತಗೊಂಡಿವೆ. ತೋಟಗಳಲ್ಲಿ ಭಾರೀ ಪ್ರಮಾಣದ ನೆರೆ ನೀರು ನಿಂತಿದೆ.

ಎರಡೇ ವಾರದಲ್ಲಿ ಎರಡನೇ ಬಾರಿಗೆ ನೆರೆ: ಹಾನಿ
ಅರೆಹೊಳೆ, ಸಾಲ್ಬುಡ ಭಾಗದಲ್ಲಿ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ಬಂದ ನೆರೆ ನೀರು ಸ್ವಲ್ಪ ಮಟ್ಟಿಗೆ ಇಳಿಮುಖಗೊಂಡರೂ ಕೃಷಿಪ್ರದೇಶಗಳಲ್ಲಿನ ನೀರು ಇಳಿಮುಖಗೊಳ್ಳದೇ ನಾಟಿ ಮಾಡಿರುವ ಭತ್ತದ ಸಸಿಗಳು ಕೊಳೆತು ಹೋಗಿತ್ತು. ಕೊಳೆತ ಭತ್ತದ ಸಸಿಗಳನ್ನು ತೆರವುಗೊಳಿಸಿದ ಬಳಿಕ ಮತ್ತೆ ನಾಟಿ ಕಾರ್ಯಕ್ಕೆ ಇಲ್ಲಿನ ಕೃಷಿಕರು ಮುಂದಾಗಿದ್ದರು. ಆದರೆ ಮಂಗಳವಾರ ಮಳೆ ಸುರಿದಿದ್ದರಿಂದ ಮತ್ತೆ ಕೃಷಿಗದ್ದೆಗಳು ಸಂಪೂರ್ಣ ಮುಳುಗಡೆಯಾಗಿದ್ದರಿಂದ ಈ ಬಾರಿಯ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಇಲ್ಲಿನ ರೈತರದು.


Spread the love