ಕೃಷಿಗೆ ಪ್ರಾಧಾನ್ಯತೆಯೇ ಗ್ರಾಹಕ ಸಂಸ್ಕೃತಿಯ ಜೀವಾಳ

Spread the love

ಮೂಡುಬಿದಿರೆ: ಎಲ್ಲಾ ಬೆಳೆಯನ್ನು ಸಾವಯವ ರೀತಿಯಲ್ಲಿ ತಾನೇ ಬೆಳೆದು ಉಪಯೋಗಿಸಿ ನಮ್ಮ ಆರೋಗ್ಯವನ್ನು ನಾವು ಇಂದು ಕಾಪಾಡಿಕೊಳ್ಳಬೇಕಾಗಿದೆ. ಮಾರುಕಟ್ಟಯಲ್ಲಿ ದೊರಕುವ ಎಲ್ಲಾ ವಸ್ತುಗಳಲ್ಲಿಯೂ ಒಂದಲ್ಲಾ ಒಂದು ರೀತಿಯ ರಾಸಾಯನಿಕ ವಿಷ ಪದಾರ್ಥಗಳು ಕಣ್ಣಿಗೆ ಕಾಣದಂತೆ ಕೂಡಿಕೊಂಡಿದ್ದು ನಮ್ಮ ದೇಹವನ್ನು ಸೇರಿ ನಮ್ಮನ್ನು ಸಾವಿನ ಮನೆಗೆ ಬಹು ಬೇಗ ಮುಟ್ಟಿಸುತ್ತಿವೆ. ಗ್ರಾಹಕನಾದವನು ಇದನ್ನು ಅರಿತುಕೊಂಡು ತನಗೆ ಅಗತ್ಯವಿರುವ ಆಹಾರವನ್ನು ತಾನೇ ಬೆಳೆಯಲು ಮನಸ್ಸು ಮಾಡಬೇಕು. ಇರುವ ಸ್ವಲ್ಪ ಸ್ಥಳದಲ್ಲಿ ಸಾಧ್ಯವಿರುವಷ್ಟು ತರಕಾರಿ, ಹಣ್ಣು-ಹಂಪಲು ಇತ್ಯಾದಿ ಬೆಳೆದು ಪೇಟೆಯ-ಅಂಗಡಿಯ ಅವಲಂಬನೆಯನ್ನು ತಗ್ಗಿಸಿಕೊಳ್ಳಬೇಕು.

ಕೇವಲ ಹಲಸಿನ ಹಣ್ಣು ಮಾತ್ರ ಅಂತಹ ವಿಷ ಸ್ಪ್ರೇಯಂತಹ ರಾಸಾಯನಿಕದಿಂದ ಇದುವರೆವಿಗೆ ಮುಕ್ತವಾಗಿದೆ. ನಮ್ಮ ಮೂರು ಮೂಲಭೂತ ಆಧಾರಗಳಾದ ಗಾಳಿ, ನೀರು, ಆಹಾರಗಳು ಸಾಕಷ್ಟು ಪ್ರಮಾಣದಲ್ಲಿ ನಮಗೆ ದೊರಕದಿದ್ದಲ್ಲಿ ನಾವು ಸಾವಿನ ಕದ ತಟ್ಟಬೇಕಾಗುತ್ತದೆ.

ಹಿಂದೆ ಸುಮಾರು 1,300 ರಷ್ಟು ವಿವಿಧ ಉತ್ತಮ ಜಾತಿಯ ತಳಿಗಳು ಭಾರತದಲ್ಲಿ ಭತ್ತದಲ್ಲಿ ಇತ್ತು. ಅವುಗಳಲ್ಲಿ ಹೆಚ್ಚಿನವು ಇಂದು ಕಣ್ಮರೆಯಾಗಿವೆ. ಆದ್ದರಿಂದ ಹೆಚ್ಚು ಹೆಚ್ಚು ಸಾವಯವ ರೀತ್ಯ ಆಹಾರವನ್ನು ಬೆಳೆಯಲು ನಾವೆಲ್ಲರೂ ಉದಾಸೀನ ಬಿಟ್ಟು ಕೃಷಿಯಲ್ಲಿ ತೊಡಗಬೇಕಾಗಿದೆ.

ಆಳುಕಾಳುಗಳ ಕೊರತೆಯನ್ನು ನೀಗಿಸಲು ಇಂದು ಬೇರೆ ಬೇರೆ ರೀತಿಯ ಯಂತ್ರೋಪಕರಣಗಳು ಉಪಯೋಗಕ್ಕೆ ಬರುತ್ತಿರುವದರಿಂದ ಪರಿಸ್ಥಿತಿ ಸ್ವಲ್ಪ ಸುದಾರಿಸಿದೆ-ಎಂದು ಮೂಡುಬಿದಿರೆ ವಲಯ ರೈತ ಸಂಘದ ಅಧ್ಯಕ್ಷ, ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಪ್ರಗತಿಪರ ಕೃಷಿಕ ಹಂಡೇಲು ಧನಕೀರ್ತಿ ಬಲಿಪ ಅಭಿಪ್ರಾಯ ಪಟ್ಟರು.

ಅವರು ಜುಲೈ 28ರಂದು ಜೈನ ಪ್ರೌಢಶಾಲೆಯಲ್ಲಿ ನಡೆದ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್‍ನ ಕೃಷಿ- ಗ್ರಾಹಕ ವಿಚಾರದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇಂತಹ ಕೃಷಿ ಇದ್ದರೆ ಮಾತ್ರ ನಮ್ಮ ಸ್ಥಳೀಯ ಸಂಸ್ಕೃತಿಗಳಾದ ಚೆನ್ನು ನಲಿಕೆ, ಆಟಿ ಕಳೆಂಜ, ಇತರ ಕುಣಿತಗಳು ಉಳಿಯಲು ಸಾಧ್ಯವಿದೆ ಎಂದೂ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಹಕ ಕ್ಲಬ್ ನ ಸಂಚಾಲಕ ಅಧ್ಯಾಪಕ, ಸಂಪನ್ಮೂಲ ವ್ಯಕ್ತಿ ರಾಯೀ ರಾಜಕುಮಾರರು ಮಾತನಾಡಿ ಕೃಷಿಯಲ್ಲಿ ಖುಷಿಯನ್ನು ಕಂಡುಕೊಂಡವರನ್ನು ನೋಡಿ, ತಿಳಿದು, ಕಲಿತುಕೊಳ್ಳುವುದು ಬೇಕಾದಷ್ಟಿದೆ. ಮಕ್ಕಳು ಅಂತಹ ಯಥಾವತ್ತು ಪ್ರಾಯೋಗಿಕ ಮಾಹಿತಿಯನ್ನು ಪಡೆದು ಕೃಷಿಯ ಬಗ್ಗೆ ಒಲವನ್ನು ಮೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. 9 ನೇ ತರಗತಿ ವಿದ್ಯಾರ್ಥಿ ಮಮತಾ ಸ್ವಾಗತಿಸಿ ಕಾರ್ಯದರ್ಶಿ ಸೋನಿಯಾ ವಂದಿಸಿದರು.


Spread the love