ಕೃಷಿ ಇಲಾಖಾ ಕಚೇರಿ ಸ್ಥಳಾoತರಕ್ಕೆ ಕೆ. ವಿಕಾಸ್ ಹೆಗ್ಡೆ ವಿರೋಧ
ಕುಂದಾಪುರ: ತಾಲ್ಲೂಕು ಕೃಷಿ ಇಲಾಖಾ ಕಚೇರಿ ಕುಂದಾಪುರ ದಿಂದ ಕೋಟೇಶ್ವರಕ್ಕೆ ಸ್ಥಳಾoತರಗೊಳ್ಳುವುದಕ್ಕೆ ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ವಿರೋಧ ವ್ಯಕ್ತ ಪಡಿಸಿದ್ದಾರೆ.
ಒಂದು ತಾಲ್ಲೂಕು ಕೇಂದ್ರದಲ್ಲಿರುವ ಕೃಷಿ ಇಲಾಖಾ ಕಚೇರಿಯನ್ನು ಬೇರೆಡೆಗೆ ವರ್ಗಾಯಿಸುವುದು ರೈತ ವಿರೋಧಿ ಕ್ರಮ. ಕುಂದಾಪುರ ತಾಲ್ಲೂಕು ಹಲವಾರು ಹಳ್ಳಿಗಳನ್ನು ಒಳಗೊಂಡಿದ್ದು ಬೇರೆ ಬೇರೆ ಊರುಗಳಿಂದ ಕೆಲಸ ಕಾರ್ಯಗಳಿಗೆ ಕುಂದಾಪುರಕ್ಕೆ ಬರುವ ರೈತರಿಗೆ ಒಂದೇ ಸೂರಿನಡಿಯಲ್ಲಿ ಹೆಚ್ಚಿನ ಎಲ್ಲಾ ಇಲಾಖಾ ಕಚೇರಿಗಳು ಸಿಗುವುದರಿಂದ ರೈತರಿಗೆ ಉಪಯುಕ್ತವಾಗುತ್ತದೆ. ಆದರೆ ಬೇರೆ ಬೇರೆ ಸಬೂಬು ಹೇಳಿ ಕೃಷಿ ಇಲಾಖಾ ಕಚೇರಿಯನ್ನು ಕೋಟೇಶ್ವರಕ್ಕೆ ಸ್ಥಳಾoತರ ಮಾಡಿದರೆ ಹೆಚ್ಚಿನ ರೈತರಿಗೆ ಇದರಿಂದ ಅನಗತ್ಯ ಕಿರುಕುಳ ನೀಡಿದಂತೆ ಆಗುತ್ತದೆ. ಇದರಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊಡೆತವನ್ನು ಕೂಡ ನೀಡುತ್ತದೆ.
ಈಗಾಗಲೇ ಕೋಟೇಶ್ವರದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವನ್ನು ರೈತರ ಅನುಕೂಲಕ್ಕೆ ಬೇರೆ ಉದ್ದೇಶಕ್ಕೆ ಬಳಸಿ ಕುಂದಾಪುರದಲ್ಲಿ ಇರುವ ಕೃಷಿ ಇಲಾಖಾ ಕಚೇರಿಯನ್ನು ಇದ್ದಲ್ಲೇ ಉಳಿಸಿಕೊಳ್ಳಬೇಕು ಇಲ್ಲದೆ ಇದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಹಾಗೂ ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.