ಕೃಷಿ ಪ್ರತಿಷ್ಠೆಯ ಕಾಯಕ – ಹಡಿಲು ಭೂಮಿ ಕೃಷಿ ಆಂದೋಲನದಲ್ಲಿ ಶಾಸಕ ರಘುಪತಿ ಭಟ್
ಉಡುಪಿ: ಕೃಷಿ ಮಾಡುವುದನ್ನು ನಮ್ಮ ಸ್ವಪ್ರತಿಷ್ಠೆಯ ಕಾಯಕವೆಂದು ಭಾವಿಸಿ ಕೃಷಿ ಭೂಮಿಯನ್ನು ಹಡಿಲು ಬಿಡದೆ ಅದರಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ನಿಟ್ಟೂರು ಪ್ರೌಢ ಶಾಲಾ ಸುವರ್ಣ ಪರ್ವದ (50 ವರ್ಷ ಪೂರ್ಣಗೊಳಿಸಿದ) ಸಲುವಾಗಿ ಕರಂಬಳ್ಳಿಯ ಸಂಜೀವ ಶೆಟ್ಟಿ ಮಾರ್ಗದ ಬಳಿ ಆಯೋಜಿಸಿದ ಹಡಿಲು ಭೂಮಿ ಕೃಷಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಸದೃಢವಾಗಿರಬೇಕಾದರೆ ಕೃಷಿ ಕ್ಷೇತ್ರ ಬಲಿಷ್ಠವಾಗಿರಬೇಕು. ದೇಶದ ಆರ್ಥಿಕತೆಯಲ್ಲಿ ಆಹಾರ ಉತ್ಪಾದನೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದರ ಮೂಲ ಕೃಷಿ. ಕೃಷಿ ಭೂಮಿಯನ್ನು ಬಂಜರಾಗಲು ಬಿಡಬಾರದು ಎಂದ ಅವರು ಇತ್ತೀಚಿನ ದಿನಗಳಲ್ಲಿ ಜನ ಕೃಷಿಯತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಹೀಗೆ ಮುಂದುವರಿಯಲಿ ಎಂದರು.
ಸುಮಾರು 8 ಎಕ್ರೆ ಪ್ರದೇಶದಲ್ಲಿ ಇಂದು ನಾಟಿ ಮಾಡಲಾಗುತ್ತಿದ್ದು, ಸ್ಥಳೀಯರೊಂದಿಗೆ ಶಾಸಕರು ನೇಜಿ ನೆಡುವ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರೊಂದಿಗೆ ಮಗನಾದ ರಾಹುಲ್, ರೆಯಾನ್ಶ್ ಮತ್ತು ಅಣ್ಣನಾದ ರಮೇಶ್ ಬಾರಿತ್ತಾಯ ಹಾಗೂ ಜಯಶ್ರೀ ಬಾರಿತ್ತಾಯ ಜೊತೆಗಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ನಿಟ್ಟೂರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಮುರಳಿ ಕಡೆಕಾರ್, ಸುವರ್ಣ ಪರ್ವದ ಅಧ್ಯಕ್ಷರಾದ ಯೋಗೀಶ್ ಚಂದ್ರಾಧರ್, ಹಿರಿಯರಾದ ಗೋಪಾಲ ಶೆಟ್ಟಿ ಮತ್ತು ಇತರ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.