ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಭತ್ತ ಬೆಳೆಯುವ ಸ್ಪರ್ಧೆ
ಮ0ಗಳೂರು : 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಯಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಅರ್ಹ ರೈತರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸುವುದು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದೇ ಈ ಯೋಜನೆಯ ಮೂಲೋದ್ದೇಶವಾಗಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆಗೆ ಭಾಗವಹಿಸುವ ಸಾಮಾನ್ಯ ರೈತರು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟ ರೂ. 100/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟ ರೂ. 25/- ನಿಗದಿತ ಪ್ರವೇಶ ಶುಲ್ಕವನ್ನು ಸಂದಾಯ ಮಾಡಬೇಕು.
ಬಹುಮಾನ ಮೊತ್ತದ ವಿವರ:- ತಾಲೂಕು ಮಟ್ಟ ಪ್ರಥಮ-15,000/-, ದ್ವಿತೀಯ-10,000/-, ತೃತೀಯ-5000/-, ಜಿಲ್ಲಾ ಮಟ್ಟ ಪ್ರಥಮ-30,000/-, ದ್ವಿತೀಯ-25,000/-, ತೃತೀಯ-20,000/-. ರಾಜ್ಯಮಟ್ಟ ಪ್ರಥಮ-50,000/-, ದ್ವಿತೀಯ-40,000/-, 35,000/-.
ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿದ್ದು, ಕಂದಾಯ ಇಲಾಖೆ ಪ್ರಕಾರ ಜಮೀನು ಹೊಂದಿರಬೇಕು ಅಥವಾ ಸ್ವಂತ ಜಮೀನು ಹೊಂದಿರದಿದ್ದರೂ ಸಹ ಬೇಸಾಯದಲ್ಲಿ ತೊಡಗಿರುವ ಕೃಷಿಕರು ಜಮೀನು ಮಾಲಿಕರಿಂದ ಸಾಮಾನ್ಯ ವ್ಯವಹಾರಿಕ ಅಧಿಕಾರ ಹೊಂದಿರಬೇಕು.
ನಿಗದಿಪಡಿಸಿರುವ ಸ್ಪರ್ಧಾತ್ಮಕ ಇಳುವರಿಯು ಹೆಕ್ಟೇರಿಗೆ 50 ಕ್ವಿಂಟಾಲ್ ಇದ್ದು, ಇದಕ್ಕಿಂತ ಹೆಚ್ಚು ಇಳುವರಿ ಬಂದಲ್ಲಿ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯನ್ನು, ಆಗಸ್ಟ್ 31, ರೊಳಗೆ ನಿಗದಿತ ಶುಲ್ಕದೊಂದಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.