ಕೃಷ್ಣಮಠ ಸ್ವಾಧೀನವಾದರೆ ನಾನು ಮಠವನ್ನು ತ್ಯಜಿಸುತ್ತೇನೆ: ಪೇಜಾವರ ಸ್ವಾಮೀಜಿ
ಉಡುಪಿ: ಕೃಷ್ಣಮಠವನ್ನು ಸ್ವಾಧೀನಪಡಿಸಿಕೊಂಡರೆ ನಾನು ಮಠದಿಂದ ಹೊರಬರುವೆ. ಸರ್ಕಾರದ ನೌಕರನಾಗಿ ನಾನು ಈ ಮಠದಲ್ಲಿ ಇರಲಾರೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ಬುಧವಾರ ಮಾತನಾಡಿ, ಮಠದ ಸರ್ಕಾರೀಕರಣ ವಿಚಾರವಾಗಿ ಯಾವುದೇ ಮೂಲಗಳಿಂದ ಖಚಿತ ಪಡಿಸಿಲ್ಲ. ಸ್ವಾಧೀನ ಪಡಿಸುವ ಪ್ರಕ್ರಿಯೆ ಇಲ್ಲದೇ ಇದ್ದಲ್ಲಿ ನಮ್ಮ ವಿರೋಧವಿಲ್ಲ. ಮಠಮಾನ್ಯಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವ ವಿಚಾರ ಕುರಿತು ಸರ್ಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ನಾನು ಇದರ ವಿರುದ್ಧ ಹೋರಾಟ ಮಾಡುವುದಿಲ್ಲ. ಬದಲಿಗೆ ಜನರಿಗೆ ಬಿಟ್ಟಿದ್ದೇನೆ ಎಂದರು.
ಸರ್ಕಾರದ ಈ ಕ್ರಮದಿಂದ ಸರ್ಕಾರ ಹಿಂದು ವಿರೋಧಿ ಎನ್ನುವುದು ಸ್ಪಷ್ಟವಾಗುತ್ತಿದೆ. ಜಾತ್ಯತೀತ ಸರ್ಕಾರ ಈ ರೀತಿ ಮಾಡಬಾರದು. ಅಲ್ಪಸಂಖ್ಯಾತ, ಬಹುಸಂಖ್ಯಾತರನ್ನು ಸಮಾನವಾಗಿ ನೋಡಬೇಕು. ಆದರೆ, ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಅಲ್ಪಸಂಖ್ಯಾತರ ಪ್ರಕರಣಗಳ್ನು ಕೈಬಿಡಲು ಮುಂದಾಗಿತ್ತು. ಮುಗ್ಧರಾದ ಎಲ್ಲರ ಪ್ರಕರಣಗಳನ್ನು ಕೈಬಿಡಲಿ ಎಂದು ಹೇಳಿದರು.