ಕೆಥೊಲಿಕ್ ಸಭಾ ಉಡುಪಿ ಪ್ರದೇಶ್; ‘ಸಮುದಾಯೋತ್ಸವ್-2020’ ಕರಪತ್ರ ಬಿಡುಗಡೆ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ 2020 ಜನವರಿ 19 ರಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ಆಯೋಜಿಸಿರುವ ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್-2020’ ಇದರ ಕಾರ್ಯಾಲಯ ಮತ್ತು ಕರಪತ್ರ ಅನಾವರಣ ಕಾರ್ಯಕ್ರಮ ಗುರುವಾರ ಸಂಘಟನೆಯ ಸಭಾಭವನದಲ್ಲಿ ಜರುಗಿತು.
ಬಳಿಕ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಉದ್ಯಮಿ ಪ್ರಖ್ಯಾತ್ ಶೆಟ್ಟಿ ಕ್ರೈಸ್ತ ಸಮುದಾಯ ತನ್ನ ಶಾಂತಿ ಮತ್ತು ಪ್ರೀತಿಯ ಸೇವೆಯಿಂದಾಗಿ ಪ್ರತಿಯೊಬ್ಬರ ಜೊತೆಗೆ ಬೆರೆತು ಬಾಳುತ್ತದೆ. ಕ್ರೈಸ್ತ ಸಮುದಾಯ ಶುಭ್ರ ಬಿಳಿ ಬಟ್ಟೆಯಂತೆ ಸಮಾಜದಲ್ಲಿ ಸದಾ ಶಾಂತಿಯನ್ನು ಬಯಸುವ ಸಮುದಾಯವಾಗಿದ್ದು ಈ ಮೂಲಕ ಎಲ್ಲಾ ಸಮುದಾಯಗಳನ್ನು ಸೌಹಾರ್ದಯುತ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತದೆ. ಸಮುದಾಯೋತ್ಸವದ ಮೂಲಕ ಕ್ರೈಸ್ತ ಸಮುದಾಯದ ಶ್ರೀಸಾಮಾನ್ಯರನ್ನು ಒಗ್ಗೂಡಿಸುವ ಮೂಲಕ ಸಮುದಾಯದ ಒಗ್ಗಟ್ಟು ಮತ್ತು ಸೌಹಾರ್ದತೆ ಮೂಡಿಸಲು ಸಹಕಾರಿಯಾಗಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ|ಜೆರಿ ವಿನ್ಸೆಂಟ್ ಡಾಯಸ್ ಮಾತನಾಡಿ ಕ್ರೈಸ್ತ ಸಮುದಾಯ ಸಮುದಾಯೋತ್ಸವ ಆಯೋಜಿಸುವ ಮೂಲಕ ತನ್ನ ಒಗ್ಗಟ್ಟು ಪ್ರದರ್ಶಿಸುವುದರ ಜೊತೆಗೆ ಸಮುದಾಯದ ಮಕ್ಕಳು ವಿದ್ಯಾಭ್ಯಾಸದ ಬಳಿಕ ವಿದೇಶಕ್ಕೆ ಹೋಗುವ ಕನಸನ್ನು ಬಿಟ್ಟು ತಾಯ್ನಾಡಿನಲ್ಲೆ ಸ್ವಂತ ಉದ್ಯೋಗ ಅಥವಾ ಸರಕಾರಿ ಸೇವೆಗಳತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಸಮ್ಮೇಳನದಲ್ಲಿ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಕೆಥೊಲಿಕ್ ಸಮುದಾಯದ ಸುಮಾರು 5000 ಭಾಗವಹಿಸಲಿದ್ದು 6 ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಹಾಗೂ ಜೀವಮಾನ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಸಮ್ಮೇಳನದ ಸಂಚಾಲಕರಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ವಾಲ್ಟರ್ ಸಿರಿಲ್ ಪಿಂಟೊ, ಡಾ|ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು. ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ‘ಸಮುದಾಯೋತ್ಸವ್-2020’ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜಾ ವಂದಿಸಿದರು.