ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್-2020’ ಲೋಗೊ ಅನಾವರಣ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ 2020 ಜನವರಿ 19 ರಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ಆಯೋಜಿಸಿರುವ ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್-2020’ ಇದರ ಲೋಗೊ ಅನಾವರಣ ಕಾರ್ಯಕ್ರಮ ಭಾನುವಾರ ಸಂಘಟನೆಯ ಸಭಾಭವನದಲ್ಲಿ ಜರುಗಿತು.
ಬಳಿಕ ಮಾತನಾಡಿದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಕೆಥೊಲಿಕ್ ಸಭಾ ಸಂಘಟನೆ ಸಮಾಜದಲ್ಲಿ ತನ್ನ ಉತ್ತಮ ಕೆಲಸಗಳನ್ನು ಮಾಡುವುದರೊಂದಿಗೆ ಹೆಸರುವಾಸಿಯಾಗಿದ್ದು ಪ್ರಸ್ತುತ ಕ್ರೈಸ್ತ ಸಮುದಾಯದ ಉಡುಪಿ ಧರ್ಮಪ್ರಾಂತ್ಯ ಹಂತದ ಶ್ರೀಸಾಮಾನ್ಯರ ಸಮ್ಮೇಳನ ಆಯೋಜಿಸುತ್ತಿರುವುದು ಸಂತಸದ ಸಂಗತಿ. ಈ ಸಮ್ಮೇಳನದ ಮೂಲಕ ಸಮುದಾಯಗಳನ್ನು ಜೋಡಿಸುವ ಕೆಲಸ ನಡೆಯಬೇಕು ಈ ನಿಟ್ಟಿನಲ್ಲಿ ಸಮ್ಮೇಳನ ಸಹಕಾರಿಯಾಗಲಿ ಎಂದರು.
ಸಮ್ಮೇಳನಕ್ಕೆ ಸುಮಾರು 3000 ಕೆಥೊಲಿಕ್ ಬಂಧುಗಳು ಭಾಗವಹಿಸುವ ನಿರೀಕ್ಷೆಯಿದ್ದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ, ಉದ್ಘಾಟನೆಗೆ ಆಗಮಿಸಲಿದ್ದು ಸಮಾರೋಪದಲ್ಲಿ ಬೆಂಗಳೂರು ಮಹಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂ|ಪೀಟರ್ ಮಚಾದೊ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಮಹರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕಿ ಜೆನೆಟ್ ಡಿಸೋಜಾ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 6 ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಹಾಗೂ ಜೀವಮಾನ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ನಿಯೋಜಿತ ಅಧ್ಯಕ್ಷರಾದ ರೊಬರ್ಟ್ ಮಿನೇಜಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸಮ್ಮೇಳನದ ಸಂಚಾಲಕರಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ವಾಲ್ಟರ್ ಸಿರಿಲ್ ಪಿಂಟೊ ಉಪಸ್ಥಿತರಿದ್ದರು. ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ‘ಸಮುದಾಯೋತ್ಸವ್-2020’ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜಾ ವಂದಿಸಿದರು.