ಕೆಥೊಲಿಕ್ ಸಭಾ ಉಡುಪಿ ವಲಯ ಸಮಿತಿಯಿಂದ ಮೆಲ್ವಿನ್ ಪೆರಿಸ್ ಸಂಗೀತ ರಸಮಂಜರಿ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ 2020 ಜನವರಿ 5ರಂದು ಸಂಜೆ 5.30ಕ್ಕೆ ಉಡುಪಿಯ ಸೈಂಟ್ ಸಿಸಿಲಿಸ್ ಶಾಲಾ ಮೈದಾನಲ್ಲಿ ಪ್ರಖ್ಯಾತ ಕೊಂಕಣಿ ಗಾಯಕರಾದ ಮೆಲ್ವಿನ್ ಪೆರಿಸ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಲಯ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ ಹೇಳಿದರು.
ಅವರು ಮಂಗಳವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದ ಮೂಲಕ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ, ವಸತಿಯ ಆಗತ್ಯ ಹೊಂದಿರುವರಿಗೆ, ಉನ್ನತ ವಿದ್ಯಾಭ್ಯಾಸ ಮುಂದವರಿಸಲು ಅಪೇಕ್ಷಿಸುವವರಿಗೆ, ಮತ್ತು ಸ್ವ-ಉದ್ಯೋಗ ಮಾಡಲು ಇಚ್ಛಿಸುವವರಿಗೆ ಸಹಾಯ ಮಾಡಲು ನಿರ್ಧರಿಸಿದ್ದು, ಆಯ್ಕೆ ಮಾಡಲಾದ ಅರ್ಹ ಕುಟುಂಬಗಳಿಗೆ ಅದೇ ವೇದಿಕೆಯಲ್ಲಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ವಲಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಸಂತ ಸಿಸಿಲಿ ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ವಿಭಾ ಮೊದಲಾದವರು ಉಪಸ್ಥಿತರಿದ್ದು ಖ್ಯಾತ ಗಾಯಕ ಮೆಲ್ವಿನ್ ಪೆರಿಸ್ ಅವರನ್ನು ಸನ್ಮಾನಿಸಲಾಗುವುದು ಎಂದರು. ರಸಮಂಜರಿ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಉದಾರ ಮನಸ್ಸಿನ ದಾನಿಗಳು ಬಡವರಿಗಾಗಿ ನೀಡುವ ಧನಸಹಾಯವನ್ನು ಸ್ವೀಕರಿಸುವ ವ್ಯವಸ್ಥೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಲಯ ಕಾರ್ಯದರ್ಶಿ ಲವೀನಾ ಪಿರೇರಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ಪ್ರಸಾರ ಸಮಿತಿಯ ಸದಸ್ಯರಾದ ಬ್ರಾಯನ್ ಕೊರೆಯಾ, ಮಾರ್ಗದರ್ಶಕರಾದ ಅಲ್ಫೋನ್ಸ್ ಡಿ’ಕೋಸ್ತಾ ಉಪಸ್ಥಿತರಿದ್ದರು.