ಕೆಥೊಲಿಕ್ ಸಭಾ ಉಡುಪಿ ವಲಯ ಸಮಿತಿಯ ವತಿಯಿಂದ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ
ಉಡುಪಿ: ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ಪರವಾಗಿ ಶೋಕಮಾತಾ ಚರ್ಚಿನ ಆವರಣದಲ್ಲಿ ಭಾನುವಾರ ಶೃದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಶೃದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೆಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಹುತಾತ್ಮ ಯೋಧರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿ ಉಗ್ರರ ಅಟ್ಟಹಾಸದಲ್ಲಿ ನಾವು ನಮ್ಮ ಪ್ರೀತಿಯ ಯೋಧರನ್ನು ಕಳೆದುಕೊಂಡಿದ್ದು ಅವರ ವೀರ ಬಲಿದಾನವನ್ನು ಸದಾ ನೆನಪಿಟ್ಟುಕೊಳ್ಳುವುದರೊಂದಿಗೆ ದೇಶದ ಐಕ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಈ ಮೂಲಕ ನಡೆಯಬೇಕಾಗಿದೆ. ಇನ್ನೊಬ್ಬರ ಸಂತೋಷಕ್ಕಾಗಿ ತಮ್ಮ ಸುಖವನ್ನು ತ್ಯಾಗ ಮಾಡುವುದಕ್ಕಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲ ಅದರಂತೆ ನಮ್ಮೆಲ್ಲರ ರಕ್ಷಣೆಗಾಗಿ ನಮ್ಮ ವೀರಯೋಧರು ಇಂದು ತಮ್ಮ ಜೀವದ ಬಲಿದಾನ ಮಾಡಿದ್ದಾರೆ ಎಂದರು.
ನಮ್ಮೆಲ್ಲರ ಸುಖ ಸಂತೋಷಕ್ಕಾಗಿ ರಾತ್ರಿ ಹಗಲು ಎನ್ನದೆ ಚಳಿ ಬಿಸಿಲನ್ನು ಲೆಕ್ಕಿಸದೆ ಸೇವೆ ಮಾಡುತ್ತಿರುವವರು ನಮ್ಮ ಯೋಧರಾಗಿದ್ದಾರೆ. ಅಂತಹ ಯೋಧರು ಇಂದು ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿರುವುದು ನಮ್ಮೆಲ್ಲರ ದುರ್ದೈವದ ಸಂಗತಿಯಾಗಿದೆ. ಅವರ ಪ್ರೀತಿಪಾತ್ರರೊಂದಿಗೆ ಕಟ್ಟಿಕೊಂಡ ಕನಸುಗಳೂ ಛಿದ್ರಗೊಂಡು ಅವರುಗಳ ಕುಟುಂಬಗಳ ದಿಗ್ಬ್ರಾಂತರಾದ ಈ ವೇಳೆಯಲ್ಲಿ ಪ್ರತಿಯೊಬ್ಬ ದೇಶದ ನಾಗರಿಕನು ಕೋಡ ಅವರೊಂದಿಗೆ ಇರಬೇಕಾದ ಅಗತ್ಯವಿದೆ. ಎಲ್ಲಾ ರೀತಿಯ ರಾಜಕೀಯ, ಧರ್ಮ ಭೇಧಗಳನ್ನು ಮರೆತು ನಮ್ಮ ಹುತಾತ್ಮ ಯೋಧರಿಗೆ ನಮ್ಮ ನಮನವನ್ನು ಸಲ್ಲಿಸುವುದರೊಂದಿಗೆ ಒಗ್ಗಟ್ಟು ಪ್ರದರ್ಶಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕರ್ನಲ್ ಅರ್ಥರ್ ರೊಡ್ರಿಗಸ್ ಮಾತನಾಡಿ ಒರ್ವ ನಿವೃತ್ತ ಯೋಧನಾಗಿ ನಮ್ಮವರನ್ನು ಕಳೆದುಕೊಂಡು ಅತೀವ ದುಃಖವಾಗಿದೆ. ಕಡಿಮೆ ನಿದ್ದೆ, ಊಟದೊಂದಿಗೆ ದೇಶ ಕಾಯುವ ಉನ್ನತ ಕೆಲಸ ಮಾಡುತ್ತಿರುವ ಯೋಧರು ಇಂದು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ನಾವು ಎಂದಿಗೂ ಕೂಡ ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಕೇಂದ್ರ ಸರಕಾರ ಉಗ್ರರ ದಮನಕ್ಕೆ ಕೈಗೊಳ್ಳುವ ಯಾವುದೇ ರೀತಿಯ ಸಹಕಾರಕ್ಕೂ ಪ್ರತಿಯೋಬ್ಬ ನಾಗರಿಕನೂ ಕೂಡ ಕೈಜೋಡಿಸಬೇಕಾಗಿದೆ ಎಂದರು.
ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ, ಮೊಂಬತ್ತಿಗಳನ್ನು ಬೆಳಗಿಸಿ ಶೃದ್ದಾಂಜಲಿ ಸಲ್ಲಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ರೋಯ್ಸನ್ ಫೆರ್ನಾಂಡಿಸ್, ಉಡುಪಿ ವಲಯ ಕೆಥೊಲಿಕ್ ಸಭಾದ ಅಧ್ಯಕ್ಷೆ ಮೇರಿ ಡಿಸೋಜಾ, ಉಡುಪಿ ಶೋಕಮಾತಾ ಇಗರ್ಜಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಅಧ್ಯಕ್ಷ ಡಿಯೋನ್ ಡಿಸೋಜಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಾರ್ಯದರ್ಶಿ ಮ್ಯಾಕ್ಷಿಮ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಅಲ್ಫೋನ್ಸ್ ಡಿಕೋಸ್ತಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ಸಿಎಸ್‍ಐ ಸಭೆಯ ಕ್ರೈಸ್ತ ಭಾಂಧವರೂ ಕೂಡ ಭಾಗವಹಿಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.