ಕೆಥೊಲಿಕ್ ಸಭಾ ಕಾರ್ಕಳ ವಲಯ ಸಮಿತಿ ವತಿಯಿಂದ ಕ್ರಿಸ್ಮಸ್ ಸೌಹಾರ್ದ ಸಂಭ್ರಮ -2018
ವರದಿ: ಅಲಿಸ್ಟರ್ ಪಿಂಟೊ, ಅತ್ತೂರು
ಕಾರ್ಕಳ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಕಳ ವಲಯ ಸಮಿತಿ ಇದರ ವತಿಯಿಂದ ಬುಧವಾರ ಸಂಜೆ ಕಾರ್ಕಳದ ಬಸ್ಸು ನಿಲ್ದಾಣದ ಬಳಿ ಕ್ರಿಸ್ಮಸ್ ಸೌಹಾರ್ದ ಸಂಭ್ರಮ -2018 ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ನೆರವೇರಿಸಿದರು. ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ|ಜೋಸ್ವಿ ಫೆರ್ನಾಂಡಿಸ್ ಆಶೀರ್ವಚನ ನೀಡಿದರು.
ಅಜೆಕಾರು ಮಹಾವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ರಂಗನಾಥ ಭಟ್, ಜೈನ್ ಹೈಸ್ಕೂಲ್ ಮೂಡಬಿದ್ರೆ ಇದರ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ, ಬಂಟ್ವಾಳ ಕಾವಲ್ ಕಟ್ಟೆಯ ಜನಾಬ್ ಹಾಫಿಲ್ ಸುಫಿಯಾನ್ ಸಖಾಫಿ ಕಾರ್ಯಕ್ರಮದ್ಲಲಿ ಸೌಹಾರ್ದ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿಭಾರತ ಭವ್ಯ ಹೆಸರು, ಮಣ್ಣು ಗಾಳಿ ನೀರು, ಬೆಟ್ಟ ಗುಡ್ಡ ಪಶು ಪಕ್ಷಿ ಎಲ್ಲವೂ ಪವಿತ್ರ. ಇಲ್ಲಿ ವಿವಿಧ ಭಾಷೆ ಸಂಪ್ರದಾಯದ ಮೆಲುಕು ಹೊಂದಿದೆ ದೇಶವಾದರೂ ನಾವೆಲ್ಲರೂ ಭಾರತೀಯರಾಗಿದ್ದೇವೆ. ನಾವೆಲ್ಲರೂ ಬೇರೆ ಧರ್ಮಕ್ಕೆ ಸೇರಿದ್ದರೂ ಕೂಡ ನಮ್ಮೆಲ್ಲರ ಗುರಿ ದೇವರೇ ಆಗಿದ್ದಾರೆ. ವಿವಿಧ ಧರ್ಮಿಯ ಆಚಾರ ವಿಚಾರ, ಜೀವಿಸುವ ರೀತಿ ಬೇರೆ ಬೇರೆ ಆಗಿರಬಹುದು ಆದರೆ ಸಾರುವ ಸಂದೇಶ ಒಂದೇ ಆಗಿದೆ. ಶಾಂತಿ ಪ್ರೀತಿ, ದಯೆ, ಕರುಣೆ, ಅಹಿಂಸೆ ಇವೆಲ್ಲವನ್ನೂ ಸಾರುವುದೇ ಪ್ರತಿಯೊಂದು ಧರ್ಮದ ಸಾರವಾಗಿದೆ. ಯಾವುದೇ ಧರ್ಮ ಕೂಡ ಅನ್ಯರಿಗೆ ನೋವುಂಟು ಮಾಡು ಎನ್ನುವುದನ್ನು ಭೋಧಿಸುವುದಿಲ್ಲ.
ಕ್ರಿಸ್ಮಸ್ ಹಬ್ಬದ ಪ್ರಮುಖ ಧ್ಯೇಯ ಶಾಂತಿ ಮತ್ತು ಪ್ರೀತಿಯನ್ನು ಸಾರುವುದಾಗಿದೆ. ಇದು ಯೇಸು ನೀಡಿದ ಪ್ರಮುಖ ಸಂದೇಶವಾಗಿದೆ. ನಿಜವಾದ ಪ್ರೀತಿ ಇರುವುದು ತ್ಯಾಗದಲ್ಲಿ ಅದರಂತೆ ಮನುಕುಲದ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿದ ಏಸುಕ್ರಿಸ್ತ ಪ್ರೀತಿಯ ಅರ್ಥ ತ್ಯಾಗವೆಂಬ ಸಂದೇಶವನ್ನು ಸಾರಿದ್ದಾರೆ. ನಾವೆಲ್ಲರೂ ಕೂಡ ಪ್ರೀತಿ-ಶಾಂತಿಯ ಸಾಧನಗಳಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ರೋಬರ್ಟ್ ಸಂಜೀವ ಇವರನ್ನು ಸನ್ಮಾನಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಅಲ್ಫೋನ್ಸ್ ಡಿಕೋಸ್ತಾ, ಜೆಸಿಐ ಕಾರ್ಕಳ ಅಧ್ಯಕ್ಷ ರೋಶನ್ ಡಿಮೆಲ್ಲೊ, ರಿಕ್ಸಾ ಚಾಲಕ ಮಾಲಕ ಸಂಘ ಹಾಗೂ ವಕೀಲರ ಸಂಘ ಕಾರ್ಕಳದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಕಳ ಅಧ್ಯಕ್ಷ ನೆವಿಲ್ ಡಿಸಿಲ್ವಾ, ಬಸ್ಸು ಏಜೆಂಟರ ಬಳಗದ ವೃಷಬರಾಜ ಜೈನ್, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಅಸೊಶೀಯೇಶನ್ ಕಾರ್ಕಳ ಅಧ್ಯಕ್ಷ ದೀಪಕ್ ಹೆಗ್ಗೆ, ಜೈ ಕರ್ನಾಟಕ ಅಟೋ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ರವಿ ಪೂಜಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಕಾರ್ಕಳ ವಲಯದ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ರೋಬರ್ಟ್ ಮಿನೇಜಸ್, ಕೋಶಾಧಿಕಾರಿ ವಿನೂಪ್ ಡಿಸೋಜಾ ಉಪಸ್ಥಿತರಿದ್ದರು.