ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮತ್ತೆ ಮುಂದೂಡಿಕೆ: ಇದೊಂದು ರಾಜಕೀಯ ಹುನ್ನಾರವೆಂದ ಡಿಕೆ ಶಿವಕುಮಾರ್

Spread the love

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮತ್ತೆ ಮುಂದೂಡಿಕೆ: ಇದೊಂದು ರಾಜಕೀಯ ಹುನ್ನಾರವೆಂದ ಡಿಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿವಕುಮಾರ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ.

ಕಳೆದ ಭಾನುವಾರ ಲಾಕ್‌ ಡೌನ್ ಕರ್ಪ್ಯೂನಿಂದಾಗಿ ಮುಂದೂಡಿಕೆಯಾಗಿದ್ದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈಗ ಜೂನ್ 7ಕ್ಕೆ ಮುಂದೂಡಿಕೆಯಾಗಿದೆ. ಇದೀಗ ಲಾಕ್ ಡೌನ್ 5.0 ನಿಂದಾಗಿ ರಾಜಕೀಯ ಕಾರ್ಯಕ್ರಮಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಮಾಣವಚನ ಮತ್ತೆ ಮುಂದೂಡಿಕೆಯಾಗಿದೆ.

ಕೇಂದ್ರ, ರಾಜ್ಯದ ಮಾರ್ಗಸೂಚಿ ಮೇಲೆ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಇದಕ್ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಗೈಡ್ ಲೈನ್ ಪ್ರಕಾರ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಗೌರವ ಕೊಡುತ್ತೇವೆ. ಆದರೂ ಕಾರ್ಯಕ್ರಮಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು,150 ಜನ ಸೇರಲು ಸರ್ಕಾರಕ್ಕೆ ಅನುಮತಿ ಕೇಳಿದ್ದೆವು. ಸಾಂಕೇತಿಕವಾಗಿ ಒಂದು ಕಾರ್ಯಕ್ರಮ ಮಾಡುವುದು ಇದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ , ಸಿದ್ದರಾಮಯ್ಯ, ಹೆಚ್ ಕೆ ಪಾಟೀಲ್ ಎಲ್ಲರೂ ಸೇರಿ ವಿನೂತನವಾಗಿ ಕಾರ್ಯಕ್ರಮ ಮಾಡುವುದಾಗಿ ಯೋಜನೆ ರೂಪಿಸಿದ್ದೆವು. 7800 ಕಡೆ ಏಕಕಾಲದಲ್ಲಿ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ನಡೆಸಲು, ಅಂಬೇಡ್ಕರ್ ಅವರ ಸಂವಿಧಾನದ ಪ್ರಸ್ತಾವನೆ ಓದಿ, ಕಾಂಗ್ರೆಸ್ ಬಾವುಟ ಹಾರಿಸಿ, ನೇರವಾಗಿ ಅದನ್ನು ಟಿವಿಯಲ್ಲಿ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಜನರನ್ನು ಕರೆದು ಕಾರ್ಯಕ್ರಮ ಮಾಡದೇ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ , ಯೂಟ್ಯೂಬ್ , ಟ್ವಿಟರ್, ಟಿವಿಯಲ್ಲಿ ವೀಕ್ಷಣೆ ಮಾಡುವುದಕ್ಕೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ, ಪೊಲೀಸ್ ಆಯುಕ್ತರ ಅನುಮತಿ ಕೇಳಲಾಗಿತ್ತು. ಇದು ಪೂರ್ವನಿಗದಿತ ಕಾರ್ಯಕ್ರಮ. ಆದರೂ ಇದಕ್ಕೆ ಅನುಮತಿ ಕೊಡುತ್ತಿಲ್ಲ. ಇದೆಲ್ಲವನ್ನು ನೋಡಿದರೆ ಇದರ ಹಿಂದೆ ನೇರಾ ರಾಜಕೀಯ ಹುನ್ನಾರ ಇದೆ ಎಂಬ ಶಂಕೆ ವ್ಯಕ್ತವಾಗುತ್ತದೆ ಎಂದರು.

ಕಳೆದ ಮಾರ್ಚ್ 11ರಂದು ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅಂದಿನಿಂದಲೇ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಪಕ್ಷದನಾಯಕರಿಗೆ ಮಾರ್ಗದರ್ಶನ ನೀಡಿ ಕೆಲಸ ಮಾಡಿದ್ದೇವೆ ಎಂದರು.

ಯಾವುದೇ ಕಾರಣಕ್ಕೂ ಪದಗ್ರಹಣ ಕಾರ್ಯಕ್ರಮ ರದ್ದಾಗುವುದಿಲ್ಲ. ಆದರೆ ದಿನಾಂಕ ಬದಲಾಗುತ್ತದೆ. ಕಾನೂನು , ಸರ್ಕಾರದ ತೀರ್ಮಾನಕ್ಕೆ ಗೌರವ ಕೊಟ್ಟು ಮತ್ತೊಂದು ದಿನಾಂಕವನ್ನು ಗೊತ್ತುಪಡಿಸಿ ಅಧಿಕಾರ ಸ್ವೀಕಾರ ಮಾಡುವುದಾಗಿ ಶಿವಕುಮಾರ್ ಹೇಳಿದರು.

ಎಲ್ಲಾ ಬ್ಲಾಕ್ ಕಾಂಗ್ರೆಸ್ ನಾಯಕರ ಜೊತೆಗೆ ಚರ್ಚಿಸಿ ಮತ್ತೊಂದು ದಿನವನ್ನು ನಿಗದಿಪಡಿಸಿ “ಪ್ರತಿಜ್ಞಾ” ಎಂಬ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ. ತಮ್ಮನ್ನೂ ಸೇರಿದಂತೆ , ಖರ್ಗೆ, ಸಿದ್ದರಾಮಯ್ಯ ಎಲ್ಲರೂ ಪಕ್ಷದ ಕಾರ್ಯಕರ್ತರೇ ಆಗಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.

ಸ್ಪೀಕರ್ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಪರಿಶೀಲನೆ ಮಾಡುವುದಕ್ಕೆ ಹೋಗಬೇಡಿ ಎಂದು ಹೇಳಿರುವುದನ್ನು ನೋಡಿದರೆ ಅವರು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಸಮಿತಿಯನ್ನು ಅವರೇ ರಚನೆ ಮಾಡಿದ್ದಾರೆ, ಇಂತಹ ಸಮಿತಿ ಮಾಡಿರುವುದು ಏಕೆ? ತಪ್ಪುಗಳನ್ನು ಸಾರ್ವಜನಿಕರಿಗೆ ತಿಳಿಸಲು ಸಮಿತಿ ಮಾಡಲಾಗಿದೆ. ಸ್ಪೀಕರ್ ವಿರುದ್ಧ ಹಕ್ಕು ಚ್ಯುತಿ ಮಂಡಿಸುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡುವುದಾಗಿಯೂ ಹಾಗೂ ಸದನದಲ್ಲಿ ಈ ವಿಚಾರವಾಗಿ ಧ್ವನಿಯೆತ್ತುವುದಾಗಿ ಡಿ.ಕೆ‌.ಶಿವಕುಮಾರ್ ಸ್ಪಷ್ಟಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯಲ್ಲಿ ಜೂನ್ 8 ನೇ ತಾರೀಖಿನವರೆಗೂ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರ ಪದಗ್ರಹಣ ‘ಪ್ರತಿಜ್ಞಾ’ ಕಾರ್ಯಕ್ರಮ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರದ ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಶಾಸನ ರೂಪಿಸುವ ನಾವೇ ಕಾನೂನು ಮುರಿದಂತಾಗುತ್ತದೆ. ಜತೆಗೆ ನಿಮಗೆ ಸ್ಥಳೀಯವಾಗಿ ಅಧಿಕಾರಿಗಳು ತೊಂದರೆ ನೀಡಲಿದ್ದಾರೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರವೇ ಈ ಕಾರ್ಯಕ್ರಮ ನಡೆಸಲಾಗುವುದು. ಹೀಗಾಗಿ 7ರಂದು ಈ ಕಾರ್ಯಕ್ರಮ ಇರುವುದಿಲ್ಲ. ಸರ್ಕಾರದ ಅನುಮತಿಗಾಗಿ ಕಾಯೋಣ. ಮನೆಯಲ್ಲೇ ಕೂತು ಜನರು, ಕಾಂಗ್ರೆಸ್ ಅಭಿಮಾನಿಗಳು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಮಿಸ್ ಕಾಲ್ (7676366666) ನೀಡುವ ಅವಕಾಶ ಕಲ್ಪಸಿದ್ದು, ಈ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕೋವಿಡ್ ಸಮಯದಲ್ಲಿ ಯಾವುದೇ ರಾಜಕೀಯ ಸಮಾರಂಭ ನಡೆಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಕಳೆದ ಎರಡೂವರೆ ತಿಂಗಳಿಂದ ನಮ್ಮ ಹೋರಾಟ ನಡೆಯುತ್ತಿದ್ದು, ಮಾನವ ಸೇವೆಗಾಗಿ, ಮಾನವೀಯತೆಯಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸರ್ಕಾರ ವಿಫಲವಾದಾಗ ಪ್ರತಿಪಕ್ಷವಾಗಿ ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.


Spread the love