ಕೆಪಿಸಿಸಿ ಅಧ್ಯಕ್ಷ ಗಾದಿ : ಸಾರ್ವಜನಿಕ ಹೇಳಿಕೆ ಅನಗತ್ಯ – ದಿನೇಶ್ ಗುಂಡೂರಾವ್
ಮಂಗಳೂರು: ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಇದೆಲ್ಲಾ ಅನಾವಶ್ಯಕ ಚರ್ಚೆಯಾಗ್ತಿದೆ. ಇಂಥ ಹೇಳಿಕೆಗಳನ್ನು ಕೊಟ್ಟರೆ ಯಾವುದೇ ಪ್ರಯೋಜನ ಇಲ್ಲ. ಏನೇ ಇದ್ದರೂ ಹೈಕಮಾಂಡ್ ಮಟ್ಟದಲ್ಲೇ ಅದೆಲ್ಲಾ ತೀರ್ಮಾನ ಆಗಬೇಕು. ಯಾರಿಗೆ ಏನೇ ವಿಷಯ ಇದ್ದರೂ ಅಲ್ಲಿ ಹೇಳಿಕೊಂಡು ತೀರ್ಮಾನ ಮಾಡಿದ್ರೆ ಒಳ್ಳೆಯದು. ಅದು ಬಿಟ್ಟು ಹೊರಗಡೆ ಹೇಳೋದ್ರಿಂದ ನಮ್ಮ ಪಕ್ಷಕ್ಕೂ ಒಳ್ಳೆಯದಲ್ಲ. ಹಾಗಾಗಿ ಈ ಥರ ಬಹಿರಂಗ ಚರ್ಚೆಯ ಅಗತ್ಯ ಇಲ್ಲ ಎಂದರು.
ನನ್ನ ಅಭಿಪ್ರಾಯದ ಪ್ರಕಾರ ಈ ಥರ ಹೇಳಿಕೆ ಕೊಡೋದನ್ನ ನಿಲ್ಲಿಸಬೇಕು. ಹೈಕಮಾಂಡ್ ಕೂಡ ಹೇಳಿದೆ, ಯಾರೂ ಈ ಥರ ಹೇಳಿಕೆ ಕೊಡಬೇಡಿ ಅಂತ. ಅದನ್ನು ಕೇಳಿಕೊಂಡಾದ್ರೂ ಎಲ್ಲರೂ ಸ್ವಲ್ಪ ಶಿಸ್ತಿನಿಂದ ಇರಬೇಕು. ರಾಜಣ್ಣಗೆ ಆಸೆ ಇದ್ದರೆ ಅದರಲ್ಲಿ ಏನೂ ತಪ್ಪೇ ಇಲ್ಲ. ಆದರೆ ಪಕ್ಷ ಏನು ತೀರ್ಮಾನ ಮಾಡುತ್ತೋ ಅದನ್ನ ಯಾರೇ ಆದ್ರೂ ಏನೇ ಆದರೂ ಒಪ್ಪಿಕೊಳ್ತಾರೆ, ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.
ದ.ಕ ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಕಡೆ ಬೇಡಿಕೆ ಇದೆ, ಮತ್ತೊಂದು ಕಡೆ ಅಧಿಕೃತ ಮರಳು ತೆಗೆಯಲು ಅವಕಾಶ ಕೊಟ್ಟರೂ ತೆಗೀತಿಲ್ಲ. ಅಕ್ರಮ ಮರಳುಗಾರಿಕೆ ಎನ್ನುವುದು ಈ ವ್ಯವಸ್ಥೆಯಲ್ಲಿ ಇರೋ ಸಮಸ್ಯೆ. ಜಿಲ್ಲೆಯ ಗಣಿ ಅಧಿಕಾರಿ ವಿಚಾರವಾಗಿ ಮೈನ್ಸ್ ಮಿನಿಸ್ಟರ್ ಜೊತೆ ಮಾತನಾಡ್ತೀನಿ ಎಂದು ತಿಳಿಸಿದರು.
ಅಕ್ರಮ ಮರಳುಗಾರಿಕೆ ಇಂದು ನಿನ್ನೆಯ ಸಮಸ್ಯೆ ಅಲ್ಲ. ಸುಲಭವಾಗಿ ಸಿಗೋ ಮರಳಿನ ಮೇಲೆ ಕೆಲವರ ಕಣ್ಣಿದೆ. ಸೇತುವೆ ಹತ್ತಿರವೂ ಮರಳು ಬಿಟ್ಟಿಲ್ಲ ಅಂದ್ರೆ ಸೇತುವೆಗಳು ಶಿಥಿಲ ಗೊಳ್ಳುತ್ತವೆ. ಇದರಿಂದ ಕೋಟ್ಯಾಂತರ ರೂ. ನಷ್ಟ ಆಗ್ತದೆ. ಎಲ್ಲರೂ ಕೈ ಜೋಡಿಸಿದ್ರೆ ಇದನ್ನ ಸರಿ ಪಡಿಸಲು ಅವಕಾಶ ಇದೆ. ಈ ಬಗ್ಗೆ ಕೆಡಿಪಿ ಮೀಟಿಂಗ್ ನಲ್ಲಿ ಈ ಬಗ್ಗೆ ಇಲಾಖೆ ಜೊತೆ ಮಾತನಾಡ್ತೀನಿ ಎಂದರು.