ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಯಸಿದ್ದೇನೆ, ನನ್ನನೇ ಮಾಡಬೇಕು ಎಂದು ಯಾರನ್ನು ಒತ್ತಾಯಿಸಿಲ್ಲ : ಸಚಿವ ರಾಜಣ್ಣ
ಉಡುಪಿ: ಎಲ್ಲ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಲು ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಯಸಿದ್ದೇನೆ. ನನ್ನನೇ ಮಾಡಬೇಕು ಎಂದು ಯಾರನ್ನು ಒತ್ತಾಯಿಸಿಲ್ಲ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರ ಅಭಿ ಪ್ರಾಯ ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿಲ್ಲ. ಡಿಕೆಶಿ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯೆ ಕೊಡಬೇಕು. ಪಕ್ಷದ ತಳ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಈ ಕೆಲಸವನ್ನು ಮಾಡಿ ಪಕ್ಷ ಸಂಘಟಿಸಬೇಕು ಎಂಬ ಉದ್ದೇಶ ನನ್ನದಾಗಿದೆ. ಬೇರೆ ಸಮುದಾಯ ವನ್ನು ವಿರೋಧಿಸಬೇಕು ಮತ್ತು ಧ್ವೇಷ ಮಾಡಬೇಕು ಎಂದು ಅರ್ಥ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ನಿರ್ಣಯಾಗುವ ವಿಚಾರವಾಗಿದೆ. ಅದರ ಬಗ್ಗೆ ಅಂತಿಮವಾಗಿ ಹೈಕಮಾಂಡ್ ನಿರ್ಣಯ ಮಾಡುತ್ತದೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವುದ ರಿಂದ ನನ್ನ ಮುಖಂಡರನ್ನು ಡಿಪೆಂಡ್ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಗ್ರಾಪಂ, ಜಿಪಂ, ತಾಪಂ ಚುನಾವಣೆಯಲ್ಲಿ ಕಾರ್ಯಕರ್ತರೇ ಪಕ್ಷದ ಆಧಾರ ಸ್ಥಂಬವಾಗಿರುತ್ತಾರೆ. ಇದು ಕಾರ್ಯಕರ್ತರಿಗೆ ಅಧಿಕಾರ ಕೊಡುವ ಚುನಾವಣೆ ಯಾಗಿದೆ. ಈ ಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಿ ಕಾರ್ಯಕರ್ತರಿಗೆ ಅಧಿಕಾರ ಹಂಚಬೇಕು. ಮುಂದಿನ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಇದರಿಂದ ಅನುಕೂಲ ವಾಗುತ್ತದೆ. ಇದರಿಂದ ಕಾರ್ಯಕರ್ತರು ಉತ್ಸಾಹದಿಂದ ಪಕ್ಷದ ಪರ ಕೆಲಸ ಮಾಡುತ್ತಾರೆ ಎಂದರು.
ಕಾರ್ಯಕರ್ತರಿಗೆ ಅಧಿಕಾರ ಕೊಡುವ ಉದ್ದೇಶ ಇಟ್ಟುಕೊಂಡು ನಾನು ನನ್ನ ಮಾತುಗಳನ್ನು ಹೇಳಿದ್ದೇನೆ. ಬಣ ರಾಜಕೀಯ ಎಲ್ಲ ಪಕ್ಷಗಳಲ್ಲೂ ಇವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಲ್ಲಾ ಕಡೆ ಬಣ ರಾಜಕೀಯ ಇದೆ. ಕಾಂಗ್ರೆಸ್ 1880ರಲ್ಲಿ ಪ್ರಾರಂಭ ಆದಾಗಲೇ ಬಣ ರಾಜಕೀಯ ಇತ್ತು. ಬಣ ರಾಜಕೀಯ ಇರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯ ಪಟ್ಟರು.