Home Mangalorean News Kannada News ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ : ಡಾ| ವೀರೇಂದ್ರ ಹೆಗ್ಗಡೆ

ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ : ಡಾ| ವೀರೇಂದ್ರ ಹೆಗ್ಗಡೆ

Spread the love

ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ : ಡಾ| ವೀರೇಂದ್ರ ಹೆಗ್ಗಡೆ

ಧಾರವಾಡ: ಪ್ರಾಕೃತಿಕವಾಗಿ ಲಭ್ಯವಿರುವ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಪ್ರಾಕೃತಿಕ ಅಸಮತೋಲನ ತಲೆದೋರಿದ ಪರಿಣಾಮ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಪ್ರಾಕೃತಿಕ ಸಂಪನ್ಮೂಲಗಳ ಪೈಕಿ ನೀರು ಅತ್ಯಂತ ಅಮೂಲ್ಯವಾದುದು. ಆದುದರಿಂದ ನೀರಿನ ಎಚ್ಚರಿಕೆಯ ಬಳಕೆಯ ವಿಚಾರದಲ್ಲಿ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ನಮ್ಮ ಪೂರ್ವಜರಲ್ಲಿ ಕೆರೆಹೂಳೆತ್ತುವ ಜವಾಬ್ದಾರಿ ಸ್ಥಳೀಯರದ್ದು ಎಂಬ ಭಾವನೆ ಇತ್ತು ಗ್ರಾಮಸ್ಥರೆಲ್ಲ ಸೇರಿ ಕೆರೆಗಳ ಹೂಳೆತ್ತಿ ಕೆರೆಯನ್ನು ಸಂರಕ್ಷಣೆ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಕೆರೆ ಹೂಳೆತ್ತುವ ಹಾಗೂ ಸಂರಕ್ಷಿಸುವ ಜವಾಬ್ದಾರಿ ಸರಕಾರದ್ದು ಎಂಬ ಧೋರಣೆ ಗ್ರಾಮಸ್ಥರಲ್ಲಿ ಮೂಡಿದೆ. ಈ ಧೋರಣೆ ಬದಲಾಗಬೇಕು. ಸಾರ್ವಜನಿಕ ಸಂಘ ಸಂಸ್ಥೆಗಳು, ಉದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಆರ್ಥಿಕವಾಗಿ ಸಂಪನ್ನರಾದವರು ಸ್ವಯಂ ಪ್ರೇರಣೆಯಿಂದ ಕೆರೆಗಳ ಸಂರಕ್ಷಣೆಯಲ್ಲಿ ಗ್ರಾಮಸ್ಥರಿಗೆ ಸಹಾಯ ಹಸ್ತ ಚಾಚಬೇಕಾದ್ದು ಇಂದಿನ ಅವಶ್ಯಕತೆಯಾಗಿದೆ ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದರು.

ಅವರು ಧಾರವಾಡ ತಾಲೂಕಿನದೇವರ ಹುಬ್ಬಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ “ಹುಗ್ಗಿ ಕೆರೆ” ಕಾಮಗಾರಿಯ ಹಸ್ತಾಂತರವನ್ನು ನೆರೆವೇರಿಸಿ ಮಾತನಾಡುತ್ತಿದ್ದರು.

ನೀರಿನ ಅಭಾವ ನೀಗಿಸಲು ಸರಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಸರಕಾರದ ಜೊತೆ ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಕೈ ಜೋಡಿಸಲೇಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲಿ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಳೆದ ಆರ್ಥಿಕ ವರ್ಷದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿ 84 ಕೆರೆಗಳ ದುರಸ್ತಿಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮತ್ತೆ 126 ಕೆರೆಗಳ ದುರಸ್ತಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂಬುದಾಗಿ ಘೋಷಿಸಿದರು.

ದಿವ್ಯ ಸಾನಿಧ್ಯವನ್ನು ವಹಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಯಾರಿಸಲಾದ ಬೀಜದುಂಡೆ (ಸೀಡ್‍ಬಾಲ್)ಗಳನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ದೇವರ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಸಿದ್ಧ ಶಿವಯೋಗಿ ಮಹಾಸ್ವಾಮಿಗಳು ಮಾತನಾಡುತ್ತಾ ದೇವರ ಹುಬ್ಬಳ್ಳಿಯ ಹುಗ್ಗಿ ಕೆರೆಗೆ ಶತಮಾನದ ಇತಿಹಾಸಇದೆ. ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ಕುಡಿಯುವ ನೀರಿನ ಮೂಲ ಇದಾಗಿತ್ತು. ಆದರೆ ನೀರಿನ ಅತಿ ಶೋಷಣೆಯಿಂದ ನೀರಿನ ಅಭಾವ ತೆಲದೋರಿದೆ. ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ನೆರವಿನೊಂದಿಗೆ ಗ್ರಾಮಸ್ಥರು ನೀಡಿದ ಸಹಕಾರದಿಂದಾಗಿ ಹಾಗೂ ವರುಣನ ಕೃಪೆಯಿಂದ ಕೆರೆ ಪೂರ್ತಿತುಂಬಿ ಗತವೈಭವದೊಂದಿಗೆ ಮತ್ತೆ ಕಂಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ದೇವರಹುಬ್ಬಳ್ಳಿ ಕೆರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.11.00 ಲಕ್ಷ ಹಾಗೂ ಸ್ಥಳೀಯರ ನಗದು ಹಾಗೂ ಶ್ರಮದ ರೂಪದ ರೂ.13.50 ಲಕ್ಷ ವಿನಿಯೋಗಿಸಲಾಗಿದ್ದು ಇದೊಂದು ಸಹಭಾಗಿತ್ವದ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದರು. ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಶ್ರೀಮತಿ ಮಂಜುಳಾ ಕೋಟಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ, ಜಿಲ್ಲಾ ಪಂಚಾಯತ್ ಸದಸ್ಯ ನಿಂಗಪ್ಪ ಮಾ. ಘಾಟಿನ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಪಕ್ಕೀರವ್ವ ನಾಯಕ, ಕೆರೆಅಭಿವೃದ್ಧಿ ಸಮಿತಿಅಧ್ಯಕ್ಷ ಸುರೇಶಗೌಡ ಕರಿಗೌಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಉಲ್ಲಾಸ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version