Home Mangalorean News Kannada News ಕೆ. ಷರೀಫಾ ಅವರ ʼನೀರೊಳಗಣ ಕಿಚ್ಚುʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

ಕೆ. ಷರೀಫಾ ಅವರ ʼನೀರೊಳಗಣ ಕಿಚ್ಚುʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

Spread the love

ಕೆ. ಷರೀಫಾ ಅವರ ʼನೀರೊಳಗಣ ಕಿಚ್ಚುʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2022ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಚಿಂತಕಿ, 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತೆ ಕೆ. ಷರೀಫಾರವರ ʼನೀರೊಳಗಣ ಕಿಚ್ಚುʼ ಕಥಾಸಂಕಲನ ಆಯ್ಕೆಯಾಗಿದೆ.

ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ 2017ರಲ್ಲಿ ನಿವೃತ್ತಿಹೊಂದಿರುವ ಕೆ. ಷರೀಫಾ ಮುಸ್ಲಿಮ್ ಸಮುದಾಯದಿಂದ ಕನ್ನಡಕ್ಕೆ ಬಂದ (1975) ಮೊದಲ ಕವಿಯತ್ರಿ. ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ, ಹಂಪಿ ಕನ್ನಡ ವಿವಿಯ ಸಿಂಡಿಕೇಟ್‌, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ (ಬೆಳಗಾಂ), ರಾಷ್ಟ್ರಕವಿ ಆಯ್ಕೆ ಸಮಿತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಆಯ್ಕೆ ಸಮಿತಿಗಳ ಸದಸ್ಯೆಯಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ, ದೇವರಾಜ ಅರಸು ಶತಮಾನೋತ್ಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಸೇವೆ ಸಲ್ಲಿಸಿರುವ ಕೆ. ಷರೀಫಾ ಹಲವು ಪ್ರಮುಖ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ.

ʼಮಹಿಳೆ ಮತ್ತು ಸಮಾಜʼ, ʼಬಂಡಾಯ ಮುಸ್ಲಿಮ್‌ ಸಂವೇದನೆ, ʼಮುಸ್ಲಿಮ್‌ ಲೋಕದ ತಲ್ಲಣಗಳುʼ, ʼಬತ್ತಳಿಕೆʼ, ʼಅಮ್ಮ ಮತ್ತು ಯುದ್ಧʼ, ʼಮುಸ್ಲಿಂ ಸಂವೇದನೆಯ ಕಾವ್ಯʼ, ಮಹಿಳೆ, ʼಚಳುವಳಿ ಮತ್ತು ರಾಜಕಾರಣʼ, ಮತ್ತು ʼಹಲವು ಹೆಜ್ಜೆಗಳ ಸದ್ದುʼ ಇವು ಕೆ. ಷರೀಫಾರವರ ಪ್ರಕಟಿತ ವಿಮರ್ಶಾ ಕೃತಿಗಳು. ʼಬಿಡುಗಡೆಯ ಕವನಗಳುʼ, ʼನೂರೇನ್‌ಳ ಅಂತರಂಗʼ, ʼಪಾಂಚಾಲಿʼ, ʼಮಮ್ತಾಜಳ ಮಹಲುʼ, ʼಬುರ್ಖಾ ಪ್ಯಾರಡೈಸ್‌ʼ, ʼಸಂತ ಪಕೀರಳ ಜೋಳಿಗೆಯ ರೊಟ್ಟಿʼ ಮತ್ತು ʼಬಯಲಿಗೂ ಬಾಗಿಲುʼ ಇವರ ಪ್ರಕಟಿತ ಕವನ ಸಂಕಲನಗಳು. ʼನೌಕರರ ಮಿಲನʼ, ʼಹೊಸ ಶತಮಾನದ ಕಾವ್ಯʼ, ʼಗೀತಾ ನಾಗಭೂಷಣ ಮಹಿಳಾ ಮಾರ್ಗʼ ಮತ್ತು ʼಒಡನಾಡಿ ಅರಸುʼ ಇವರ ಪ್ರಕಟಿತ ಸಂಪಾದನಾ ಕೃತಿಗಳು. ಹಾಗೂ ʼಮುಸಿಂ ಮಹಿಳಾ ಸಂವೇದನೆʼ (ಸಂಶೋದನೆ), ʼಫೈಜ್‌ ನಾಮಾʼ (ಅನುವಾದ) ಮತ್ತು ʼಮಿರ್ಜಾ ಗಾಲಿಬ್ʼ(ವ್ಯಕ್ತಿ ಚಿತ್ರಣ) ಇವರ ಇತರ ಪ್ರಕಟಿತ ಕೃತಿಗಳು. ಕೆ. ಷರೀಫಾರವರ ಇನ್ನೂ ಆರು ಕೃತಿಗಳು ಮುದ್ರಣ ಹಂತದಲ್ಲಿದ್ದು ಕನ್ನಡ ಓದುಗರ ಕೈಸೇರಬೇಕಿದೆ.

ಇವರ ಅನೇಕ ಕವಿತೆ ಮತ್ತು ಲೇಖನಗಳು ರಾಜ್ಯದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಅನೇಕ ವಿವಿ ಅಧೀನದಲ್ಲಿರುವ ಪದವಿ ಕಾಲೇಜುಗಳ ಪಠ್ಯಗಳಿಗೆ ಸೇರ್ಪಡೆಯಾಗಿದ್ದು, ಕೆ. ಷರೀಫಾ ಅವರ ಸಾಹಿತ್ಯ ಕೃಷಿಯ ಬಗ್ಗೆ ಗುಲ್ಬರ್ಗಾ ಮತ್ತು ತುಮಕೂರು ವಿವಿಗಳ ವಿದ್ಯಾರ್ಥಿಗಳಿಂದ ಪಿಹೆಚ್ಡಿ ಮತ್ತು ಎಂಫಿಲ್‌ ಅಧ್ಯಯನಗಳು ನಡೆದಿವೆ. ʼವನಿತಾ ಸಾಹಿತ್ಯ ಶ್ರೀʼ, ʼಅತ್ತಿಮಬ್ಬೆʼ, ʼನಲ್ಲೂರ್‌ ಪ್ರಸಾದ್‌ʼ, ʼಅಂಕʼ, ಸಿದ್ದಲಿಂಗ ಪಟ್ಟಣ ಶೆಟ್ಟಿʼ, ʼವೀಚಿʼ, ʼಡಾ. ಅನುಪಮಾʼ, ʼಡಾ. ಗೀತಾ ದೇಸಾಯಿʼ, ʼಗಡಿನಾಡ ಗೌರವʼ, ʼನಾಡ ಪ್ರಭು ಕೆಂಪೇಗೌಡʼ, ಕವಿ ಸರ್ವಜ್ಞ ಹಾಗೂ ʼಬಸವ ಚೈತನ್ಯʼ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರ ಸಾಹಿತ್ಯ ಸಾಧನೆಗೆ ದೊರೆತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೆ. ಷರೀಫಾ ಅವರ ಜೀವಮಾನದ ಸೇವೆಗಾಗಿ ಗೌರವ ಪ್ರಶಸ್ತಿ ನೀಡಿ ಆದರಿಸಿದೆ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ʼಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿʼಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ನವೆಂಬರ್‌ 23ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ 39 ಕೃತಿಗಳು ಬಂದಿದ್ದು, ಹಿರಿಯ ಚಿಂತಕ ಪ್ರೊ. ಮುಝಪ್ಫರ್‌ ಅಸಾದಿ, ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಮತ್ತು ಪ್ರಾಧ್ಯಾಪಕ ಪ್ರೊ. ಹೈದರ್‌ ಅಲಿ ತೀರ್ಪುಗಾರರಾಗಿ ಸಹಕರಿಸಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version