ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಗೋಡಂಬಿ ಕಾರ್ಖಾನೆಗಳು ಸಂಕಷ್ಟದಲ್ಲಿ- ಪ್ರಮೋದ್ ಮಧ್ವರಾಜ್
ಕಾರ್ಕಳ: ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರು ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇರುವಾಗ ಗೋಡಂಬಿ ಉದ್ಯಮವು ಒಳ್ಳೆಯ ರೀತಿಯಲ್ಲಿ ನಡೆಯುತ್ತಿತ್ತು. ಇಂದು ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಜಿ.ಎಸ್.ಟಿ ಹಾಗೂ ನೋಟ್ ಬ್ಯಾನ್ ನಂತರ ಶೇ. 60 ಗೋಡಂಬಿ ಕಾರ್ಖಾನೆಗಳು ತೊಂದರೆಯಲ್ಲಿವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಕಾರ್ಕಳದಲ್ಲಿ ವಿವಿಧ ಗೇರುಬೀಜ ಕಾರ್ಖಾನೆಯ ಕಾರ್ಮಿಕರನ್ನು ಭೇಟಿಯಾಗಿ ಪ್ರಮೋದ್ ಮಧ್ವರಾಜರು ಮತಯಾಚಿಸಿ ಮಾತನಾಡಿ ಪ್ರಸ್ತುತ ಕಾರ್ಯಚರಿಸುತ್ತಿರುವ ಕಾರ್ಖಾನೆಗಳು ಕೂಡಾ ನೌಕರರಿಗೆ ಪದೇ ಪದೇ ರಜೆ ಕೊಟ್ಟು ಸಾವಿರಾರು ಮಹಿಳೆಯರಿಗೆ ಉದ್ಯೋಗ ಇಲ್ಲದ ಪರಿಸ್ಥಿತಿ ಉಂಟಾಗಿದೆ. ವಿಶೇಷವಾಗಿ ಕಾರ್ಕಳ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಗೋಡಂಬಿ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾರೆ. ಯುವಕರಿಗೆ ಈಗಾಗಲೇ ಕೆಲಸವಿಲ್ಲ. ಮಹಿಳೆಯರಿಗೆ ಈಗ ಇದ್ದ ಕೆಲಸವೂ ಇಲ್ಲವಾದರೆ ಬದುಕು ಕಷ್ಟಕರವಾಗಲಿದೆ. ಇದನ್ನು ಮನಗಂಡು ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ.
ರಾಹುಲ್ ಗಾಂಧಿಯವರು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಬಂದಲ್ಲಿ ಘೋಷಿಸಿದ ನ್ಯಾಯ್ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಿ.ಪಿ.ಎಲ್. ಕುಟುಂಬದ ಓರ್ವ ಮಹಿಳೆಯ ಖಾತೆಗೆ ತಿಂಗಳಿಗೆ ನೇರ ನಗದು 6000 ರೂಪಾಯಿ, ವರ್ಷಕ್ಕೆ ಒಟ್ಟು 72,000 ರೂಪಾಯಿಯನ್ನು ಪಾವತಿಸುವ ಕಾರ್ಯಕ್ರಮದಿಂದ ಆರ್ಥಿಕವಾಗಿ ಮಹಿಳೆ ಸಬಲವಾಗಲು ಸಹಕಾರಿಯಾಗಿದೆ.
ಗತಕಾಲದ ಮನಮೋಹನ್ ಸಿಂಗ್ ಸರಕಾರವಿರುವಾಗ ಇದ್ದ ಆರ್ಥಿಕ ಸುಸ್ಥಿತಿ ಪರಿಸ್ಥಿತಿಯನ್ನು ಪುನರಪಿ ದೇಶದಲ್ಲಿ ಅನುಷ್ಠಾನಿಸಲು, ಗೇರುಬೀಜ ಕಾರ್ಖಾನೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೆಜ್ಗಳನ್ನು ಕೇಂದ್ರ ಸರಕಾರದ ಮೂಲಕ ಪ್ರಾರಂಬಿಸಲು ತಾನು ಬದ್ಧ. ತನ್ನನ್ನು ತಾವು ಲೋಕಸಭೆಗೆ ಆಯ್ಕೆಗೊಳಿಸಬೇಕು ಎಂದು ವಿನಂತಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ, ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ಮಂಜುನಾಥ ಪೂಜಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶೇಖರ ಮಡಿವಾಳ, ಶಶಿಧರ ಶೆಟ್ಟಿ ಎಲ್ಲೂರು, ಆರಿಫ್ ಕಲ್ಲೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.