Home Mangalorean News Kannada News ಕೇಂದ್ರೀಕೃತ ಅಡುಗೆ ಕೇಂದ್ರದ ಮುಖಾಂತರ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪ್ರತಿಭಟನೆ

ಕೇಂದ್ರೀಕೃತ ಅಡುಗೆ ಕೇಂದ್ರದ ಮುಖಾಂತರ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪ್ರತಿಭಟನೆ

Spread the love

ಕೇಂದ್ರೀಕೃತ ಅಡುಗೆ ಕೇಂದ್ರದ ಮುಖಾಂತರ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪ್ರತಿಭಟನೆ

ಮಂಗಳೂರು: ಶಿಕ್ಷಣ ಸಚಿವರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ತನ್ವೀರ ಸೇಠ್‍ರವರು ರಾಜ್ಯದಲ್ಲಿ ಕೇಂದ್ರಿಕೃತ ಅಡುಗೆ ಕೇಂದ್ರಗಳನ್ನು ನಿರ್ಮಿಸಿ ಶಿಕ್ಷಕರ ಮೇಲಿನ ಹೊರೆಯನ್ನು ತಗ್ಗಿಸಲಾಗುವದೆಂದು ತಿಳಿಸಿದ್ದಾರೆ. ಈ ರೀತಿಯ ಯೋಚನೆ ಮತ್ತು ಹೇಳಿಕೆಯನ್ನು ನಮ್ಮ ಸಂಘಟನೆ ವಿರೋಧಿಸುತ್ತದೆ ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಅವರು ಹೇಳಿದರು.

ಅವರು ಡಿಡಿಪಿಐ ಕಚೇರಿ ಮುಂದುಗಡೆ ನಡೆದ ಬಿಸಿಯೂಟ ನೌಕರರ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಕರ್ನಾಟಕದಲ್ಲಿ 10 ವರ್ಷಗಳಿಂದೀಚೆಗೆ ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಫಲಿತಾಂಶ ಮತ್ತು ಮಕ್ಕಳ ಹಾಜರಾತಿ ಹೆಚ್ಚಾಗುತ್ತಿದೆ. ಇಂತಹ ಫಲಿತಾಂಶ ಬರಲು ಪ್ರಮುಖ ಕಾರಣಗಳಲ್ಲಿ ಬಿಸಿಯೂಟವು ಒಂದು. (National council Of Educational Research and Training) ಅಧ್ಯಯನ ಮತ್ತು ವರದಿ ಈ ಯೋಜನೆ ಜಾರಿಯಾದ ಮೇಲೆ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಕಿಯಾಶೀಲ ಭಾಗವಹಿಸುವಿಕೆ ಹಿಂದೆಂದಿಗಿಂತ ಹೆಚ್ಚಾಗಿದೆ. ಶಾಲೆ ಬಿಡುವ ಪ್ರಮಾಣ ಕಡಿಮೆಯಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಮತ್ತು ಸಾಮಾಜಿಕ ತುಳಿತಕ್ಕೋಳಗಾದವರ ಶಾಲೆ ಬಿಡುವ ಮಕ್ಕಳ ಸಂಖ್ಯೆ (Dropout) ಕಡಿಮೆಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳ ನಡುವೆ ಜಾತಿ ತಾರತಮ್ಯ ನೀಗಿಸಲು ಮತ್ತು ಸಹಪಂಕ್ತಿ ಭೋಜನಗಳಿಂದ ಮಕ್ಕಳಲ್ಲಿ ಸಾಮರಸ್ಯತೆಯನ್ನು ಬೆಳೆಸಲು ಸಾಧ್ಯವಾಗಿದೆ ಎಂಬುದನ್ನು ತಿಳಿಸಿದೆ. ಇಂತಹ ಪರಿಣಾಮಕಾರಿ ಫಲಿತಾಂಶಕ್ಕೆ ಕಾರಣರಾದವರು ಬಿಸಿಯೂಟ ನೌಕರರು. ಬಿಸಿಯೂಟ ನೌಕರರು ಬದುಕುಳಿಯುವ ಕೂಲಿ ಮತ್ತಿತರ ಕನಿಷ್ಟ ಸೌಲಭ್ಯಗಳಿಗಾಗಿ ಸರ್ಕಾರದ ಎದುರು ಹಲವು ಭಾರಿ ಮನವಿ ಪತ್ರಗಳನ್ನು ಸಲ್ಲಿಸಿದೆ. 2004ರಲ್ಲಿ ಸುಪ್ರೀಂಕೋರ್ಟ್ ಅಡುಗೆ ತಯಾರಿಸುವ ಬಗ್ಗೆ ನೀಡಿರುವ ಮಾರ್ಗದರ್ಶನದ ಪ್ರಕಾರ ಆಗತಾನೆ ಅಡುಗೆ ಬೇಯಿಸಿ ಬಿಸಿ ಬಿಸಿ ಯಾದ ತಾಜಾ ಆಹಾರವಾಗಿ ನೀಡಬೇಕು. ಸರ್ಕಾರ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ಬದಲಿಗೆ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಬಜಾಲ್, ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿ, ಜಿಲ್ಲಾ ಮುಂದಾಳು ರಾಮಣ್ಣ ವಿಟ್ಲ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡಬಿದ್ರಿ, ಖಜಾಂಚಿ ಭವ್ಯ, ಮುಂದಾಳುಗಳಾದ ಶಾಂತ, ಅರುಣ, ಅಂಬಿಕಾ, ಗಿರಿಜಾ, ಯಶೋಧ, ರೇಖಾಲತ, ತುಳಸಿ, ಜಯಂತಿ, ಸಂಧ್ಯಾ, ಸಿದ್ದವ್ವ, ಉಮಾವತಿ, ಜಲಜಾಕ್ಷಿಯವರು ವಹಿಸಿದ್ದರು.

ಪ್ರಾರಂಭದಲ್ಲಿ ಗಿರಿಜಾ ಮೂಡಬಿದ್ರಿ ಸ್ವಾಗತಿಸಿ, ಕೊನೆಯಲ್ಲಿ ಭವ್ಯಾರವರು ಧನ್ಯವಾದವನ್ನು ನೀಡಿದರು.


Spread the love

Exit mobile version