ಕೇಂದ್ರ ಮಾರುಕಟ್ಟೆ ಸ್ಥಳಾಂತರಿಸಿ ಜನರನ್ನು ಬಿಜೆಪಿ ಜನಪ್ರತಿನಿಧಿಗಳು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ – ಜೆ ಆರ್ ಲೋಬೊ
ಮಂಗಳೂರು: ತರಾತುರಿಯಲ್ಲಿ ಕೇಂದ್ರ ಮಾರುಕಟ್ಟೆಯನ್ನು ಸ್ಥಳಾಂತರಿಸಿ ಬಿಜೆಪಿ ಜನಪ್ರತಿನಿಧಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.
ಇವತ್ತು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಈ ಸಂಧರ್ಭದಲ್ಲಿ ನನಗೆ ಬಂದಿರುವ ಹಲವಾರು ದೂರವಾಣಿ ಕರೆಗಳ ಮೇರೆಗೆ ತರಕಾರಿ ಸಗಟು ಮಾರುಕಟ್ಟೆಯನ್ನು ನಗರದ ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿ ಎ. ಪಿ. ಎಮ್. ಸಿ ಸ್ಥಳಾಂತರಿಸಿದ ಜಿಲ್ಲಾಡಳಿತದ ಅವಸರದ ನಿರ್ಧಾರದಿಂದ ಇವತ್ತು ಸಗಟು ವ್ಯಾಪಾರಸ್ಥರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಯಾವುದೆ ಶೆಲ್ಟರ್ ಗಳನ್ನು ನಿರ್ಮಾಣ ಮಾಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ನೆನೆದು ವ್ಯಾಪಾರ ನಡೆಸುತ್ತಿರುವ ಅವರ ಕಣ್ಣೀರು ಜಿಲ್ಲಾಡಳಿತ ಹಾಗೂ ಅಧಿಕಾರ ನಡೆಸುತ್ತಿರುವ ರಾಜಕೀಯ ಪ್ರತಿನಿಧಿಗಳಿಗೆ ಅರ್ಥ ಅಗುತ್ತಿಲ್ಲ . ತಮ್ಮ ಪ್ರತಿಷ್ಠೆಯಲ್ಲಿ ಬೆಳೆಸಲು ತರಾತುರಿಯಲ್ಲಿ ರಾಜಕೀಯ ಪ್ರತಿನಿಧಿಗಳು ಕೇಂದ್ರ ಮಾರುಕಟ್ಟೆಯನ್ನು ಎ. ಪಿ. ಎಮ್. ಸಿ ಗೆ ಈ ಸಂಕಷ್ಟ ಸಂಧರ್ಭದಲ್ಲಿ ವರ್ಗಾವಣೆ ಮಾಡುವ ಅವಶ್ಯಕತೆ ಏನಿತ್ತು. ಕೋವಿಡ್ 19 ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಅವಶ್ಯಕ ವಸ್ತುಗಳು ಜನರಿಗೆ ಕೈಗೆಟಕುವ ರೀತಿಯಲ್ಲಿ ಸಿಗಬೇಕಲ್ಲವೇ.. ಇಂತಹಾ ಸ್ಥಿತಿಯಲ್ಲಿ ಕೇಂದ್ರ ಮಾರುಕಟ್ಟೆಯನ್ನು ವರ್ಗಾಹಿಸಿರುವುದು ಎಷ್ಟು ಸರಿ.? ಮಳೆಗಾಲ ಹತ್ತಿರ ಬರುವಾಗ ಯಾವುದೇ ವ್ಯವಸ್ಥೆ ಮಾಡದೆ ಈ ರೀತಿಯ ಅವೈಜ್ಞಾನಿಕ ನಿರ್ಧಾರ ಕೈಗೊಂಡದ್ದು ಎಷ್ಟು ಸರಿ.? ಜನಪ್ರತಿನಿಧಿಗಳಿಗೆ ಜನರ ಸಮಸ್ಯೆ ಯಾಕೆ ಅರ್ಥವಾಗುವುದಿಲ್ಲ. ಒಂದು ಕೇಂದ್ರ ಮಾರುಕಟ್ಟೆ ಹೊಸತ್ತಾಗಿ ನಿರ್ಮಾಣ ಮಾಡಬೇಕಾದರೆ ಜನರಿಗೆ ವ್ಯಾಪಾರಸ್ಥರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಇವರಿಂದ ಮಾಡಲು ಯಾಕೆ ಆಗುತ್ತಿಲ್ಲ. ಸರಿಯಾದ ಚಿಂತನೆ ಇಲ್ಲದೆ ಜನರನ್ನು ಸಂಕಷ್ಟಕ್ಕೆ ಈಡು ಮಾಡುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ. ಸ್ಮಾರ್ಟ್ ಸಿಟಿ ಎಂದು ಹೇಳಿಕೊಂಡು ಜನರನ್ನು ನರಕಕ್ಕೆ ದೂಡುತ್ತಿರುವುದು ಅತ್ಯಂತ ಖೇದಕರ. ಯಾವುದೇ ಮುಂದಾಲೋಚನೆ ಇಲ್ಲದೆ ಕೇಂದ್ರ ಮಾರುಕಟ್ಟೆಯನ್ನು ಎ. ಪಿ. ಎಮ್. ಸಿ ಯಾರ್ಡ್ಗೆ ಸ್ಥಳಾಂತರಿಸಿರುವುದು ಸಂಪೂರ್ಣ ತಪ್ಪು.
ಜನರ ದಿನನಿತ್ಯದ ಅಗತ್ಯ ವಸ್ತುಗಳು ಜನರಿಗೆ ತಲುಪಲು ಸರಿಯಾದ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ನಂತರ ಎ. ಪಿ. ಎಮ್. ಸಿ ಸಗಟು ಮಾರುಕಟ್ಟೆಯ ನಿರ್ಮಾಣ ಮಾಡಬೇಕೇ ವಿನಹ ಜನರನ್ನು ನರಕಕ್ಕೆ ದೂಡಿ ಅವರ ಶವಗಳ ಮೇಲೆ ಮಾರುಕಟ್ಟೆ ನಿರ್ಮಾಣ ಮಾಡುವ ಚಿಂತನೆ ಸಂಪೂರ್ಣ ಖಂಡನೀಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ , ಸಂಸದರು , ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನಾದರೂ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾ ನಗರ ಪಾಲಿಕೆ ಎಚ್ಚೆತ್ತುಕೊಂಡು ತುರ್ತಾಗಿ ಸಗಟು ವ್ಯಾಪಾರಸ್ಥರಿಗೆ ಸರಿಯಾದ ವ್ಯವಸ್ಥೆಯನ್ನು ನಗರದಲ್ಲಿ ಮಾಡಿ ಕೊಡಲಿ. ಮೊದಲು ಬಂದರು ಪ್ರದೇಶದ ಸಗಟು ವ್ಯಾಪಾರವನ್ನು ವರ್ಗಾವಣೆ ಮಾಡಿದ ನಂತರ ಕೇಂದ್ರ ಮಾರುಕಟ್ಟೆಯನ್ನು ಎ. ಪಿ. ಎಮ್. ಸಿ ಗೆ ವರ್ಗಾಹಿಸಿರುವುದು ಸೂಕ್ತ ಎಂದು ಮಾಜಿ ಶಾಸಕರಾದ ಜೆ.ಆರ್ ಲೋಬೊ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.