ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಆರ್.ಜಿ.ಪಿ.ಆರ್.ಎಸ್ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ

Spread the love

ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಆರ್.ಜಿ.ಪಿ.ಆರ್.ಎಸ್ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಸಮರ್ಪಕ ಅನುದಾನ ನೀಡದಿರುವ ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಕೇಂದ್ರದ ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ಥೋಮರ್ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಬುಧವಾರ ಮನವಿ ಸಲ್ಲಿಸಲಾಯತು.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ಉದ್ಯೋಗ ಖಾತರ ಯೋಜನೆಗಳಿಗೆ ನೀಡಬೇಕಾದ ಅನುದನದಲ್ಲಿ 1000 ಕೋಟಿಗಳಿಗೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದೆ. 2013ರಲ್ಲಿ ಕುಡಿಯುವ ನೀರಿನ ರಾಜ್ಯದ ಪಾಲು 868 ಕೋಟಿಗಳಾಗಿದ್ದರೆ ಕೇಂದ್ರ ಸರ್ಕಾರದ ಪಾಲು 960 ಕೋಟಿ ಹಾಗೇಯೇ 2017-18ರಲ್ಲಿ ಸುಮಾರು 300 ಕೋಟಿ ರೂಪಾಯಿ ಬರಬೇಕಾಗಿದ್ದು ಅದನ್ನು ಕೂಡ ಕೇಂದ್ರ ಸರಕಾರ ನೀಡಿಲ್ಲ.

ಕುಡಿಯುವ ನೀರಿನ ಅನುದಾನವನ್ನು ರಾಜ್ಯ ಹಾಗೂ ಕೇಂದ್ರಗಳು ಶೇ50-50 ರ ಅನುಪಾತದಲ್ಲಿ ನೀಡಬೇಕು ಆದರೆ, ರಾಜ್ಯ ಸರ್ಕಾರವು ಕಳೆದ 5 ವರ್ಷಗಳಲ್ಲಿ ತನ್ನ ಪಾಲಿನ ಶೇ 88ರಷ್ಟನ್ನು ನೀಡಿದ್ದು ಕೇಂದ್ರ ಸರ್ಕಾರವು ಕೇವಲ ಶೇ12ರಷ್ಟನ್ನು ಮಾತ್ರ ನೀಡಿದೆ. ವಿಶೇಷವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ತಾತ್ಸಾರ ವಿಷಾದನೀಯ. ದೇಶದ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾದ ಕೇಂದ್ರ ಸರ್ಕಾರ ಈ ರೀತಿ ತಾರತಮ್ಯ ಮಾಡಿರುವುದು ಖಂಡನೀಯ ಅಲ್ಲದೆ ಈಗಾಗಲೇ ಜಿ ಎಸ್ ಟಿಯಿಂದ ಇಡೀ ದೇಶದಲ್ಲಿ ರಾಜ್ಯವೇ ಹೆಚ್ಚು ಪಾಲನ್ನು ನೀಡುತ್ತಾ ಬಂದಿದೆ. ಆದ್ದರಿಂದ ರಾಜ್ಯಕ್ಕೆ ಸಲ್ಲಬೇಕಾದ ಅನುದಾನದ ಪಾಲನ್ನು ನೀಡುವಂತೆ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.

ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರ್, ಪದಾಧಿಕಾರಿಗಳಾದ ವೇರೋನಿಕಾ ಕರ್ನೆಲಿಯೋ, ಪ್ರಮೀಳಾ ಜತ್ತನ್ನ, ಸುನೀತಾ ಶೆಟ್ಟಿ, ವೈ ಬಿ ರಾಘವೇಂದ್ರ, ಮೇರಿ ಡಿಸೋಜಾ, ವಾಣಿ ಶೆಟ್ಟಿ, ದೇವೆಂದ್ರ ಕೋಟ, ಸತೀಶ್ ಜಫ್ತಿ, ಮೊಹಮ್ಮದ್ ರಫೀಕ್, ಶಂಕರ್ ನಾಯಕ್, ಸೂರಿ ಸಾಲಿಯಾನ್, ಫ್ರ್ಯಾಂಕಿ ಡಿಸೋಜ, ಸೋಮನಾಥ್, ಯಶೋಧ, ಉಷಾ, ಅನುಷಾ, ಲಕ್ಷಣ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love