ಕೇಬಲ್ ಟಿವಿ : ಅಧಿಕ ದರ ವಸೂಲಿ ಮಾಡಿದರೆ ಕ್ರಮ – ಡಿಸಿ ಸಿಂಧೂ ಬಿ. ರೂಪೇಶ್ ಎಚ್ಚರಿಕೆ
ಮಂಗಳೂರು : ಕೇಬಲ್ ಟಿವಿ ಆಪರೇಟರ್ಗಳು ಗ್ರಾಹಕರಿಂದ ಆಯಾ ಚಾನೆಲ್ಗಳಿಗೆ ನಿಗದಿಪಡಿಸಿದ ದರವನ್ನೇ ಪಡೆಯಬೇಕು. ನಿಗದಿತ ದರಕ್ಕಿಂತ ಹೆಚ್ಚು ಮಾಸಿಕ ಶುಲ್ಕ ವಸೂಲಿ ಮಾಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಎಚ್ಚರಿಸಿದ್ದಾರೆ.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಹಕರಿಂದ ಪಡೆಯುವ ಮಾಸಿಕ ಶುಲ್ಕಕ್ಕೆ ರಶೀದಿ ನೀಡುವುದು ಕಡ್ಡಾಯವಾಗಿದೆ. ಅಲ್ಲದೇ, ಆರಂಭದಲ್ಲಿ ಪಡೆಯುವ ಠೇವಣಿ ಮೊತ್ತಕ್ಕೂ ಸೂಕ್ತ ರಶೀದಿ ನೀಡಬೇಕು. ಕೇಬಲ್ ಆಪರೇಟರ್ಗಳು ಆಯಾ ಪ್ರದೇಶದ ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ನೋಂದಣಿ ಮಾಡದವರನ್ನು ಅನಧಿಕೃತರೆಂದು ಪರಿಗಣಿಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮತ್ತು ಜಾಹೀರಾತುಗಳ ಬಗ್ಗೆ ಹಾಗೂ ಕೇಬಲ್ ಆಪರೇಟರ್ಗಳ ಸೇವೆಯ ನ್ಯೂನತೆಗಳ ಬಗ್ಗೆ ಸಾರ್ವನಿಕರಿಂದ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ದೂರು ಕೋಶಗಳನ್ನು ತೆರೆಯಲಾಗಿದೆ. ಆಯಾ ತಾಲೂಕು ಮಟ್ಟದಲ್ಲೂ ಸಾರ್ವಜನಿಕರು ತಾಲೂಕು ಕಚೇರಿಗಳಲ್ಲಿ ದೂರು ಸಲ್ಲಿಸಬಹುದಾಗಿದೆ. ಎಲ್ಲಾ ಸ್ಥಳೀಯ ಚಾನೆಲ್ಗಳು ಹಾಗೂ ಕೇಬಲ್ ಆಪರೇಟ್ಗಳು ಇನ್ನು ಮುಂದೆ ತಾವು ಪ್ರಸಾರ ಮಾಡುವ ಎಲ್ಲಾ ಕಾರ್ಯಕ್ರಮಗಳ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕೇಳಿದ ತಕ್ಷಣ ದಾಖಲೆ ಹಾಗೂ ದೃಶ್ಯಗಳನ್ನು ಹಾಜರುಪಡಿಸಲು ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಯಾವುದೇ ಟೆಲಿವಿಷನ್ ಕಾರ್ಯಕ್ರಮ ಸಾರ್ವಜನಿಕ ವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಅಥವಾ ನೋವುಂಟು ಮಾಡಿದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಮಿತಿ ಶಿಫಾರಸ್ಸು ಮಾಡಲಿದೆ. ಖಾಸಗಿ ಟಿವಿಗಳ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಸಮಿತಿ ಕಾರ್ಯ ನಿರ್ವಹಿಸಲಿದೆ. ಸಮಾಜದ ಹಿತಕ್ಕೆ ಭಂಗ ತರುವಂತಹ ಕಾರ್ಯಕ್ರಮ ಪ್ರಸಾರ ಮಾಡುವ ಯಾವುದೇ ಕೇಬಲ್ ಅಪರೇಟರ್ /ಚಾನೆಲ್ ವಿರುದ್ಧ ನಿಯಾಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು. ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯನ್ನು ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್ಗಳ ಉಪಕರಣವನ್ನು ವಶಪಡಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಈ ಕಾಯಿದೆಯ ಅಧಿಕೃತ ಅಧಿಕಾರಿಗಳು ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಕಲಿ ಟಿವಿ ಚಾನೆಲ್ಗಳ ಮೇಲೆ ನಿಗಾ ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಚಾನೆಲ್ಗಳ ಹೆಸರಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವವರ ವಿರುದ್ಧವೂ ನಿಗಾ ಇಡಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮಾತನಾಡಿ, ಭಾರತ ಸರಕಾರದ ವಾರ್ತಾ ಸಚಿವಾಲಯವು ಸ್ಥಳೀಯ ಮಟ್ಟದಲ್ಲಿ ಕೇಬಲ್ ಟಿವಿ ಚಾನೆಲ್ಗಳ ಕಾರ್ಯಕ್ರಮದ ಮೇಲೆ ನಿಗಾ ಇಡಲು, ಅನಪೇಕ್ಷಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಹಾಗೂ ಕೇಬಲ್ ಆಪರೇಟರ್ಗಳ ಸೇವೆಯ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಈ ಕಾಯಿದೆ ಜಾರಿಗೆ ತಂದಿದೆ. ದ.ಕ. ಜಿಲ್ಲೆಯಲ್ಲಿ 127 ನೋಂದಾಯಿತ ಕೇಬಲ್ ಆಪರೇಟರ್ಗಳಿದ್ದಾರೆ. ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಕೇಬಲ್ ಟಿವಿ ಸೇವೆಗಳ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ನಗರ ಪೊಲೀಸ್ ಕೇಂದ್ರ ವಿಭಾಗದ ಎಸಿಪಿ ಜಗದೀಶ್, ಪೊಲೀಸ್ ನಿರೀಕ್ಷಕ ಚೆಲುವರಾಜು, ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ ಸದಸ್ಯರಾದ ಹಿಲ್ಡಾ ರಾಯಪ್ಪನ್, ನಿವೃತ್ತ ಪ್ರಾಂಶುಪಾಲ ಡಾ.ಎನ್. ಇಸ್ಮಾಯಿಲ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ, ಬಲ್ಮಠ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಮ್ಯಾರೆಟ್ ಮಸ್ಕರೇಞಸ್ ಮತ್ತಿತರರು ಇದ್ದರು.