ಕೈಕುಂಜೆ ಸರಗಳ್ಳತನ : ಇಬ್ಬರ ಬಂಧನ
ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಲಿಗೆ ನಿವಾಸಿ ಜನಾರ್ದನ ಮಂಜಲ್ಪಾಡಿ ಎಂಬವರ ಪುತ್ರ ಕಿರಣ್(24) ಮತ್ತು ಕ್ಯಾಲಿಕಟ್ ಜಿಲ್ಲೆಯ ಪೆರಂಬರ ತಾಲೂಕಿನ ಚೆಂಬರಾ ನಿವಾಸಿ ಅಹ್ಮದ್ ಪಿ.ಕೆ. ಎಂಬವರ ಪುತ್ರ ನಿಝಾಮ್(25) ಎಂದು ಗುರುತಿಸಲಾಗಿದೆ.
ಬಂಟ್ವಾಳ ಬಿ.ಮೂಡಾ ಗ್ರಾಮದ ಕೈಕುಂಜೆ ನಿವಾಸಿ ಸುಬ್ರಾಯ ಮಯ್ಯ ಎಂಬವರ ಪತ್ನಿ ಕಮಲಾಕ್ಷಿ ಎಸ್. ಮಯ್ಯ ಎಂಬ ಮಹಿಳೆ ಜನವರಿ 5ರಂದು ಸಂಜೆ 6:45ರ ಸುಮಾರಿಗೆ ಕೈಕುಂಜೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದರಲ್ಲಿ ಬಂದ ಇಬ್ಬರು ಮಹಿಳೆಯ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದರು.
ಒಂದೇ ವಾರದಲ್ಲಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಂಟ್ವಾಳ ನಗರ ಠಾಣೆ ಪೊಲೀಸರು ಎಗರಿಸಲ್ಪಟ್ಟ 7 ಪವನ್ ತೂಕದ 1,40,000 ರೂ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಹಾಗೂ 50,000 ಸಾವಿರ ರೂ. ಮೌಲ್ಯದ ಬೈಕನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಈ ಪ್ರಕರಣ ನಡೆದ ದಿವಸವೇ ಮಂಗಳೂರು ನೀರುಮಾರ್ಗದಲ್ಲಿ ಮಹಿಳೆಯೊಬ್ಬರ ಕತ್ತಿನಿಂದ ಕರಿಮಣಿ ಸರ ಎಗರಿಸಲು ವಿಫಲ ಯತ್ನ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ ರಾವ್ ವೊರಸೆ, ಹೆಚ್ಚುವರಿ ಅಧೀಕ್ಷಕ ಸಿ.ಬಿ.ವೇದಾಮೂರ್ತಿ ಅವರ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಬಂಟ್ವಾಳ ವ್ರತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಮಾರ್ಗದರ್ಶನದಂತೆ, ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಎಂ.ಎಂ., ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪ ಅವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎಎಸ್ಸೈ ಸಂಜೀವ ಕೆ., ಎಚ್.ಸಿ.ಗಳಾದ ಅಬ್ದುಲ್ ಕರೀಂ, ಸುಜು, ಕ್ರಷ್ಣ, ಸುರೇಶ್, ಸಿಬ್ಬಂದಿಯಾದ ಅದ್ರಾಮ, ಸಂಪತ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಕಂಪ್ಯೂಟರ್ ವಿಭಾಗದ ಸಿಬ್ಬಂದಿಯಾದ ಸಂಪತ್ ಮತ್ತು ದಿವಾಕರ ಪಾಲ್ಗೊಂಡರು.