ಕೈಕೊಟ್ಟ ಪುಷ್ಯ ಮಳೆ: ನೀರಿಲ್ಲದೆ ಬಿರುಕು ಬಿಟ್ಟಿವೆ ಗದ್ದೆಗಳು! ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು

Spread the love

ಕೈಕೊಟ್ಟ ಪುಷ್ಯ ಮಳೆ: ನೀರಿಲ್ಲದೆ ಬಿರುಕು ಬಿಟ್ಟಿವೆ ಗದ್ದೆಗಳು! ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು

ಕುಂದಾಪುರ: ಕಳೆದೊಂದು ವಾರಗಳಿಂದ ಮಳೆ ಇಲ್ಲದ ಪರಿಣಾಮ ಗದ್ದೆಗಳಲ್ಲಿ ನೀರಿಲ್ಲದೆ ಕೃಷಿಕರು ನಾಟಿ ಮಾಡಿದ ಗದ್ದೆಗಳು ಒಣಗಿ ಬಿರುಕುಬಿಟ್ಟಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಆಘಾತ ನೀಡಿದೆ.

ಕರಾವಳಿಯ ಪ್ರಮುಖ ಬೆಳೆ ಭತ್ತ. ಮುಂಗಾರು ಆರಂಭಗೊಂಡ ಬೆನ್ನಲ್ಲೇ ಗದ್ದೆಯತ್ತ ಮುಖ ಮಾಡುವ ಕರಾವಳಿಯ ಕೃಷಿಕರು ಭಿತ್ತನೆ ನಡೆಸಿ ನಾಟಿ ಕಾರ್ಯ ನಡೆಸುತ್ತಾರೆ. ಈ ಬಾರಿ ಮುಂಗಾರು ಬಿರುಸುಗೊಂಡಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲೇ ನಾಟಿ ಮಾಡಿದ್ದಾರೆ. ಆದರೆ ಕಳೆದೊಂದು ವಾರಗಳಿಂದ ಪುಷ್ಯ ಮಳೆ ಕೈಕೊಟ್ಟಿದ್ದರಿಂದ ಎತ್ತರಪ್ರದೇಶದಲ್ಲಿರುವ ಗದ್ದೆಗಳು ಬಿಸಿಲಿನ ಝಳಕ್ಕೆ ನೀರಿಲ್ಲದೇ ಬಿರುಕುಬಿಟ್ಟಿವೆ. ಇನ್ನೂ ಕೆಲ ಕಡೆಗಳಲ್ಲಿ ಬಿಸಿಲ ತಾಪಕ್ಕೆ ಭತ್ತದ ಸಸಿಗಳು ಕೆಂಬಣ್ಣಕ್ಕೆ ತಿರುಗಿದೆ.

ನೀರಿಲ್ಲದೇ ಕಳೆಯೂ ತೆಗೆದಿಲ್ಲ!:
ಸಾಲು ನಾಟಿ ಮಾಡಿದ ಹದಿನೈದು ದಿನಗಳ ಬಳಿಕ ಯಂತ್ರದ ಮೂಲಕ ಕಳೆ ತೆಗೆಯುವ ಈ ಭಾಗದ ಕೃಷಿಕರು ಮತ್ತೆರಡು ಬಾರಿ ಯಂತ್ರವನ್ನು ಓಡಿಸಿ ಭತ್ತದ ಸಸಿಯ ಬುಡವನ್ನು ಹದಗೊಳಿಸಿ ಬಿಡುತ್ತಾರೆ. ಗದ್ದೆಯಲ್ಲಿ ನೀರು ತುಂಬಿದ್ದರೆ ಮಾತ್ರ ಕಳೆ ಯಂತ್ರ ಓಡಿಸಲು ಸಾಧ್ಯವಾಗುವುದರಿಂದ ಈ ಬಾರಿ ನಾಟಿ ಮಾಡಿದ ಹದಿನೈದು ದಿನಗಳ ಬಳಿಕ ಯಂತ್ರ ಓಡಿಸಿ ಕಳೆ ತೆಗೆದದ್ದು ಬಿಟ್ಟರೆ ಆ ಬಳಿಕ ಗದ್ದೆಯಲ್ಲಿ ನೀರು ಒಣಗಿದ್ದರಿಂದ ಕಳೆಯೂ ಕೂಡ ತೆಗೆಯಲು ಸಾಧ್ಯವಾಗಿಲ್ಲ. ಇನ್ನು ಕೆಲವರು ಮನೆಯ ಬಾವಿಯಿಂದ ಪಂಪ್ಸೆಟ್ ಮೂಲಕ ನೀರು ಹಾಯಿಸಿ ಕಳೆ ಯಂತ್ರವನ್ನು ಓಡಿಸಿ ಬುಡ ಮೆದುಗೊಳಿಸಿದ್ದಾರೆ.

ಈ ಬಾರಿ ಹೆಚ್ಚು ಬೇಸಾಯ:
ದೂರದೂರುಗಳಲ್ಲಿ ನೆಲೆಸಿದ್ದ ಈ ಭಾಗದ ಜನರು ಲಾಕ್ಡೌನ್ನಿಂದಾಗಿ ತಮ್ಮೂರಿಗೆ ಮರಳಿದ್ದು, ಎಲ್ಲರೂ ಈ ಬಾರಿ ತಮ್ಮ ತಮ್ಮ ಕೃಷಿ ಗದ್ದೆಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಹಿಂದೆ ಕೃಷಿ ಮಾಡಲಸಾಧ್ಯವಾಗದೆ ಹಡಿಲುಬಿಟ್ಟ ಕೃಷಿ ಗದ್ದೆಗಳು ಮತ್ತೆ ಎಲ್ಲರ ಆಗಮನದ ಬಳಿಕ ಹಸಿರು ಕಂಡಿದೆ. ಲಾಕ್ಡೌನ್ನಿಂದಾಗಿ ಎಲ್ಲರೂ ಮನೆಯಲ್ಲಿದ್ದ ಪರಿಣಾಮ ಈ ಬಾರಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹಡಿಲು ಬಿಡ್ಡಿದ್ದ ಗದ್ದೆಗಳೂ ಸೇರಿದಂತೆ ಬಹುತೇಕ ಗದ್ದೆಗಳಲ್ಲಿ ನಾಟಿ ಕಾರ್ಯ ನಡೆದಿದೆ.

ಮಳೆ ಬಾರದಿದ್ದರೆ ಕೃಷಿ ಸರ್ವನಾಶ:
ಎತ್ತರಪ್ರದೇಶದ ಕೃಷಿ ಗದ್ದೆಗಳಲ್ಲಿ ನೀರಿಲ್ಲದೇ ಬಿರುಕುಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಮಳೆ ಬಾರದೆ ಇದ್ದರೆ ತಗ್ಗು ಪ್ರದೇಗಳಲ್ಲಿನ ಗದ್ದೆಗಳು ಕೂಡ ನೀರಿಲ್ಲದೇ ಬಿರುಕು ಬಿಡುವ ಸಾಧ್ಯತೆ ಇದೆ. ಇದು ಹೀಗೆ ಮುಂದಿವರಿದರೆ ಕೃಷಿಕರು ಮಾಡಿರುವ ಭತ್ತ ಕೃಷಿ ಸರ್ವನಾಶವಾಗಲಿದೆ.

ದೊಡ್ಡ ಪುಷ್ಯ ಮಳೆ ಭತ್ತ ಕೃಷಿಗೆ ಅವಶ್ಯ!:
ಡೊಡ್ಡ ಪುಷ್ಯ ಮಳೆ ಭತ್ತದ ಕೃಷಿಗೆ ಅವಶ್ಯವಾಗಿದೆ. ಪ್ರತೀ ವರ್ಷವೂ ಬಿರುಸುಗೊಳ್ಳುವ ಈ ಮಳೆ ಈ ಬಾರಿ ಮಾತ್ರ ಕೃಷಿಕರಿಗೆ ಕೈಕೊಟ್ಟಿದೆ. ದೊಡ್ಡ ಪುಷ್ಯ ಮಳೆಯಿಂದಲೇ ಭತ್ತದ ಸಸಿಗಳು ಚೆನ್ನಾಗಿ ಹಿಳ್ಳೆ ಹೊಡೆದು, ತೆನೆ ಬರುತ್ತದೆ. ಈ ಸಮಯದಲ್ಲಿ ಮಳೆಯ ಅವಶ್ಯಕತೆ ತುಂಬಾ ಇದೆ ಎನ್ನುತ್ತಾರೆ ಹೆಮ್ಮಾಡಿಯ ಪ್ರಗತಿಪರ ಕೃಷಿಕ ಓಲ್ವಿನ್ ಕ್ರಾಸ್ತಾ.

ತಗ್ಗುಪ್ರದೇಶಗಳಲ್ಲಿನ ಕೃಷಿ ಗದ್ದೆಗಳಿಗೆ ತೋಡಿನ ಮೂಲಕ ನೀರು ಹಾಯಿಸಲು ಅವಕಾಶಗಳಿವೆ. ಆದರೆ ನಮಗೆ ಎತ್ತರ ಪ್ರದೇಶದಲ್ಲಿರುವ ಗದ್ದೆಗಳದೆ ಸಮಸ್ಯೆ. ಈಗಾಗಲೇ ಮಕ್ಕಿಗದ್ದೆಗಳೆಲ್ಲವೂ ಬಿಸಿಲ ತಾಪಕ್ಕೆ ನೀರು ಒಣಗಿ ಬಿರುಕು ಬಿಟ್ಟಿವೆ. ಮಳೆ ಮುಂದೆಯೂ ಕೈಕೊಟ್ಟರೆ ಮಾಡಿರುವ ಕೃಷಿ ಸರ್ವನಾಶವಾಗಲಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಹೆಮ್ಮಾಡಿ ಬೈಲು ಮನೆ ಕೃಷಿ ನಾಗೇಶ್ ಪೂಜಾರಿ


Spread the love