ಕೈಗಾರಿಕಾ ವಲಯ ಭೂಪರಿವರ್ತನೆ ಎನ್ಓಸಿ – ಉದ್ಯಾವರ ನಾಗರಿಕರಿಂದ ಪ್ರತಿಭಟನೆ
ಉಡುಪಿ: ಗ್ರಾಮದ ಜನತೆಯ ಬದುಕಿಗೆ ಮಾರಕವಾಗುವ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸರ್ವಾಧಿಕಾರಿ ಮತ್ತು ಜನವಿರೋಧಿ ನಿಲುವನ್ನು ಖಂಡಿಸಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಸೋಮವಾರ ಉದ್ಯಾವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಜರುಗಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರುಉದ್ಯಾವರದಲ್ಲಿ ಮೀನು ಉತ್ಪನ್ನ ಕೈಗಾರಿಕಾ ಘಟಕವು ಮಾಡುತ್ತಿರುವ ಹಾನಿಯಿಂದಾಗಿ ಉದ್ಯಾವರ ಗ್ರಾಮ ಪಂಚಾಯತ್ ಇನ್ನು ಮುಂದೆ ಯಾವುದೇ ಕೈಗಾರಿಕೆಗೆ ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡಬಾರದು ಎಂದು ನಿರ್ಣಯಿಸಿತ್ತು ಮತ್ತು ಗ್ರಾಮ ಸಭೆಗಳಲ್ಲೂ ಈ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಆದರೆ ಇದೀಗ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರವನ್ನು ನೀಡಿದ್ದು ಇದರ ಹಿಂದೆ ಯಾರು ಇದ್ದಾರೆ ಎನ್ನುವುದು ಸ್ಪಷ್ಟಪಡಿಸಬೇಕು. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಗ್ರಾಮದ ಜನರ ಭಾವನೆಗಳಿಗೆ ಬೆಲೆ ಕೊಟ್ಟು ನೀಡಿರುವ ನಿರಾಪೇಕ್ಷಣಾ ಪತ್ರವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ತೀವ್ರ ತರವಾದ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಹಿರಿಯ ಸಾಮಾಜಿಕ ಕಾರ್ಯಕ್ರರ್ತ ಭಾಸ್ಕರ್ ಪ್ರಸಾದ್, ನ್ಯಾಯಾವಾದಿ ಕೆಪಿಸಿಸಿ ವಕ್ತಾರ ಸುಧೀರ್ ಮರೋಳಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸರ್ವಾಧಿಕಾರಿ ಮತ್ತು ಜನವಿರೋಧಿ ನಿಲುವನ್ನು ಖಂಡಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಉದ್ಯಾವರ ಗ್ರಾಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಕೆಪಿಸಿಸಿ ಸದಸ್ಯ ಎಮ್ ಎ ಗಫೂರ್, ಕಾಂಗ್ರೆಸ್ ನಾಯಕರಾದ ಹರೀಶ್ ಕಿಣಿ, ನವೀನ್ ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಆನಂದ್, ಲಾರೆನ್ಸ್ ಡೆಸಾ ಹಾಗೂ ಇತರರು ಉಪಸ್ಥಿತರಿದ್ದರು.