ಕೈಪುಂಜಾಲು, ಮಟ್ಟು, ಕನಕೊಡ ಪರಿಸರದಲ್ಲಿ ತೀವ್ರ ಕಡಲ್ಕೊರೆತ; ಸುರಕ್ಷತಾ ಕ್ರಮಕ್ಕೆ ಶಾಸಕ ಮೆಂಡನ್ ಸೂಚನೆ
ಉಡುಪಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೈಪುಂಜಾಲು, ಮಟ್ಟು, ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕೊಡ ಪಡುಕೆರೆ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವಾರು ಮನೆ, ಗೆಸ್ಟ್ ಹೌಸ್, ರಸ್ತೆಗಳು ಅಪಾಯದ ಹಂತದಲ್ಲಿದೆ.
ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕೋಡ ಪಡುಕೆರೆ ಭಾಗದ ಕಡಲ ಕಿನಾರೆಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ರಕ್ಷಣೆಗಾಗಿ ಹಾಕಿದ್ದ ಕಲ್ಲುಗಳು ಸಮುದ್ರ ಪಾಲಾಗಿ ಕಾಂಕ್ರಿಟ್ ರಸ್ತೆಯ ಅಡಿಭಾಗದ ಮಣ್ಣು ಕುಸಿದಿದೆ.
ಇದೇ ರೀತಿ ಕಡಲ್ಕೊರೆತ ಮುಂದುವರೆದಲ್ಲಿ ಕಾಂಕ್ರಿಟ್ ರಸ್ತೆ ಸಂಪೂರ್ಣವಾಗಿ ಕಡಲು ಪಾಲಾಗಲಿದ್ದು, ಮಲ್ಪೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಶನಿವಾರ ಕೈಪುಂಜಾಲು, ಮಟ್ಟು ಪರಿಸರದ ಕಡಲ್ಕೊರೆತ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಪುರಸಭಾ ಸದಸ್ಯೆ ರಮಾ ಶೆಟ್ಟಿ, ಕಾಪು ತಹಶೀಲ್ದಾರ್ ಗುರುಸಿದ್ದಯ್ಯ, ಬಂದರು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕೂಡಲೇ ತುರ್ತು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದಾರೆ.